ನಟ ಅನಿರುದ್ಧ ವಿಷ್ಣುವರ್ಧನ್ ಅಳಿಯನಾಗಲು ಹಿಂಜರಿದದ್ದು ಏಕೆ ಆಗ ವಿಷ್ಣುದಾದಾ ಹೇಳಿದ ಮಾತೇನು

By Infoflick Correspondent

Updated:Monday, August 22, 2022, 15:30[IST]

ನಟ ಅನಿರುದ್ಧ ವಿಷ್ಣುವರ್ಧನ್ ಅಳಿಯನಾಗಲು ಹಿಂಜರಿದದ್ದು  ಏಕೆ ಆಗ ವಿಷ್ಣುದಾದಾ ಹೇಳಿದ ಮಾತೇನು

ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮಿಂಚಿದ್ದು ಈಗ ಭಾರಿ ವಿವಾದಕ್ಕೆ ಸಿಲುಕಿದ  ನಟ ಅನಿರುದ್ಧ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಅಳಿಯ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಇಂದು ಈ ಸೀರಿಯಲ್ ಮೂಲಕ ಇವರು ಕರ್ನಾಟಕದಲ್ಲಿ ಮನೆ ಮಾತಾಗಿದ್ದಾರೆ. ವೀಕ್ಷಕರ ಪ್ರೀತಿಯ ಆರ್ಯವರ್ಧನ್ ಆಗಿದ್ದಾರೆ ಅನಿರುದ್ಧ ವಿಷ್ಣು ಪುತ್ರಿ ಕೀರ್ತಿ ಅವರನ್ನು ಅನಿರುದ್ಧ ಮದುವೆಯಾಗಿದ್ದಾರೆ. ಇವರ ಮದುವೆ ಫಿಕ್ಸ್ ಆಗಿದ್ದು ಹೇಗೆ? ಸಾಹಸ ಸಿಂಹ ಅಂದು ಮಗಳ ಮದುವೆ ವಿಚಾರದಲ್ಲಿ ಅನಿರುದ್ಧಗೆ ಹೇಳಿದ್ದೇನು? ವಿಷ್ಣುವರ್ಧನ್ ಮನಸ್ಸು ಮಾಡಿದ್ದರೆ ಮಗಳಿಗೆ ಬೇರೆ ಹುಡುಗನನ್ನು ಮದುವೆ ಮಾಡಿಕೊಡಬಹುದಿತ್ತು. ಆದರೆ ಮಧ್ಯಮ ವರ್ಗದಿಂದ ಬಂದ ಅನಿರುದ್ಧ ಅವರನ್ನೇ ಅಳಿಯನನ್ನಾಗಿ ಮಾಡಿಕೊಳ್ಳಲು ಕಾರಣ ಏನು? ಇಲ್ಲಿದೆ ಹಲವರಿಗೆ ತಿಳಿಯದ ಸಂಗತಿ.   

ಧಾರವಾಡದಿಂದ ಬೆಂಗಳೂರಿಗೆ ಬಂದು ಇಲ್ಲಿನ ಕಂಪನಿಯೊಂದರಲ್ಲಿ ಇಂಟಿರೀಯರ್ ಡಿಸೈನರ್ ಆಗಿ ಕೆಲಸ ಆರಂಭಿಸಿದ್ದರು. ಆಗ ಈ ಕಚೇರಿ ಕೆಲಸ ಮುಗಿದ ನಂತರ ರಂಗಭೂಮಿ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ಅನಿರುದ್ಧ ಮಾಡುತ್ತಿದ್ದ 'ಹಯವದನ' ನಾಟಕದ ನಿರ್ದೇಶನದ ಜವಾಬ್ದಾರಿ ಹೊತ್ತವರು ವಿಷ್ಣುವರ್ಧನ್ ಅಣ್ಣ ಎನ್.ರವಿಕುಮಾರ್. ಈ ನಾಟಕ ನೋಡಲು ಮಕ್ಕಳಾದ ಚಂದನಾ ಮತ್ತು ಕೀರ್ತಿ ಅವರನ್ನೂ ಕರೆದುಕೊಂಡು ವಿಷ್ಣುವರ್ಧನ್ ಬಂದಿದ್ದರಂತೆ. ನಾಟಕ ನೋಡಿ ಮೆಚ್ಚಿಕೊಂಡು ಅನಿರುದ್ಧ ಅವರನ್ನು ಶಂಕರ್‌ನಾಗ್‌ಗೆ ಹೋಲಿಸಿದ್ದಂತೆ ವಿಷ್ಣುದಾದಾ. ಹಲವು ದಿನಗಳು ಕಳೆದ ನಂತರ ಕೀರ್ತಿ ಮದುವೆಯಾಗುತ್ತೀಯಾ ಅಂತ ವಿಷ್ಣುವರ್ಧನ್ ಅನಿರುದ್ಧ ಅವರನ್ನು ಕೇಳಿದರಂತೆ. 

ಮಧ್ಯಮವರ್ಗದಿಂದ ಬಂದವನು ನಾನು. ನಿಮ್ಮ ಮಗಳನ್ನು ತುಂಬ ಮುದ್ದಿನಿಂದ ಬೆಳೆಸಿದ್ದೀರಾ, ನನ್ನ ಜೊತೆ ಬದುಕೋದು ಅವರಿಗೆ ಕಷ್ಟವಾಗಬಹುದು, ಅವರ ಲೈಫ್‌ ಸ್ಟೈಲ್‌ಗೆ ತೊಂದರೆಯಾಗದಂತೆ ನೋಡಿಕೊಳ್ಳೋದು ನನಗೆ ಸಾಧ್ಯವಾಗದಿರಬಹುದು' ಎಂದು ಅನಿರುದ್ಧ ಹೇಳಿದರಂತೆ. ಆಗ ವಿಷ್ಣುವರ್ಧನ್ 'ಭಾರತಿ ಅವರನ್ನು ಮದುವೆಯಾದಾಗ ನಾನೂ ಕೂಡ ಹೀಗೆ ಇದ್ದೆ, ಜನರ ಕಣ್ಣುಗಳು ಸುಳ್ಳು ಹೇಳೋದಿಲ್ಲ. ನೀವು ಒಳ್ಳೆಯ ವ್ಯಕ್ತಿ, ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತೀರಾ ಎಂಬ ನಂಬಿಕೆಯಿದೆ' ಎಂದು ಹೇಳಿದ್ದರಂತೆ ವಿಷ್ಣು. ಉಜ್ವಲಾ ಮತ್ತು ಹರ್ಷವರ್ಧನ್ ಅವರು ಅನಿರುದ್ಧ ಅವರ ಪಾಲಕರು. ವಿಷ್ಣುವರ್ಧನ್ ಮಗಳ ಮದುವೆ ವಿಚಾರ ಪ್ರಸ್ತಾಪ ಆದಾಗ ಅನಿರುದ್ಧ ಬಳಿ ಕೀರ್ತಿ ನಿನಗೆ ಇಷ್ಟಾನಾ ಎಂದು ಕೇಳಿದ್ದರಂತೆ. ಆಗ ಅನಿರುದ್ಧ, ಕೀರ್ತಿ ಅವರ ಸರಳತೆ, ನಗು ನನಗೆ ತುಂಬ ಇಷ್ಟ ಎಂದಿದ್ದರಂತೆ.

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಬಳಿ ಇರುವ ಚಂದ್ರೋದಯ ಕಲ್ಯಾಣಮಂಟಪದಲ್ಲಿ ವಿಷ್ಣುವರ್ಧನ್ ಅವರ ಎರಡನೇ ಮಗಳು ಕೀರ್ತಿ ಮತ್ತು ಅನಿರುದ್ಧ ಜತ್ಕರ್ ಮದುವೆ ಅದ್ದೂರಿಯಾಗಿ 2002ರಲ್ಲಿ ನೆರವೇರಿತ್ತು. ಇಂದು ಕೀರ್ತಿ ಮತ್ತು ಅನಿರುದ್ಧ ಕುಟುಂಬ ಬೆಂಗಳೂರಿನ ಜೆಪಿನಗರದಲ್ಲಿ ವಾಸವಾಗಿದ್ದಾರೆ. ಈ ದಂಪತಿಗೆ ಜ್ಯೇಷ್ಠವರ್ಧನ್ ಮತ್ತು ಶ್ಲೋಕ ಎಂಬ ಮುದ್ದಾದ ಮಕ್ಕಳಿದ್ದಾರೆ.