ಸಿಹಿ ಸುದ್ದಿ ಕೊಟ್ಟ ಬಿಗ್ ಬಾಸ್ ಸ್ಫರ್ಧಿ ಯಾರು ಗೊತ್ತಾ..?

Updated: Tuesday, April 6, 2021, 16:34 [IST]

ಬಿಗ್ ಬಾಸ್ ಮೂಲಕ ಖ್ಯಾತಿ ಪಡೆದು, ಸಿನಿಮಾದಲ್ಲಿಯೂ ನಟಿಸಿರುವ ಈ ನಟಿ ಇಂದು ಸಿಹಿಸುದ್ದಿ ಕೊಟ್ಟಿದ್ದಾರೆ. ಹೌದು.. ಬಿಗ್ ಬಾಸ್ ಸೀಸನ್ 6 ರ ಸ್ಫರ್ಧಿ ನಯನಾ ಪುಟ್ಟಸ್ವಾಮಿ ತಾಯಿಯಾಗುತ್ತಿದ್ದಾರೆ. 
ಪತಿ ಚರಣ್ ತೇಜ್ ಅವರೊಂದಿಗೆ ವಿದೇಶದಲ್ಲಿ ವಾಸವಿದ್ದಾರೆ. ಈಗ ಅವರ ಮನೆಯಲ್ಲಿ ಖುಷಿ ತುಂಬಿದೆ. ಮುಂಬರುವ ಆಗಸ್ಟ್ನಲ್ಲಿ ನಯನಾ ಪುಟ್ಟಸ್ವಾಮಿ ದಂಪತಿ ತಂದೆ-ತಾಯಿಗಳಾಗಿ ಬಡ್ತಿ ಪಡೆಯಲಿದ್ದೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.  

ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮ ಪಡುತ್ತಿರುವ ಫೋಟೋ, ವಿಡಿಯೋಗಳನ್ನು ಹಂಚಿಕೊಂಡು "ಹೊಸ ಆರಂಭ, ಈ ಖುಷಿಯನ್ನು ಸಂಭ್ರಮ ಪಡಲು ಕಾಯಲಾಗುತ್ತಿಲ್ಲ. ಆಗಸ್ಟ್ ತಿಂಗಳಲ್ಲಿ ಮಗು ಬರಲಿದೆ. ಧನ್ಯವಾದಗಳು" ಎಂದು ನಯನಾ ಹೇಳಿದ್ದಾರೆ. ನಯನಾ ಹಾಗೂ ಚರಣ್ ತೇಜ್ ಅವರಿಗೆ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ.

ಬಿಗ್ ಬಾಸ್ ಸೀಸನ್ 6 ರಲ್ಲಿ ನಯನಾ ಭಾಗವಹಿಸಿದ್ದರು. 56 ದಿನಗಳ ಕಾಲ ಅವರು ಬಿಗ್ ಬಾಸ್ ಮನೆಯಲ್ಲಿದ್ದು, ಆಟವಾಡಿ ಹೊರನಡೆದಿದ್ದರು. ಅಷ್ಟೇ ಅಲ್ಲದೆ ಅವರು 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಆಗಮಿಸಿದ್ದರು. ಈ ಶೋನಲ್ಲಿ ಅದ್ಭುತವಾದ ಆಟವಾಡಿ ಟ್ರೋಫಿ ಗೆದ್ದಿದ್ದರು. ನಟ ಅನಂತ್ ನಾಗ್, ಶ್ರೀಮಹದೇವ್ ಜೊತೆ 'ಚಿಟ್ಟೆಹೆಜ್ಜೆ' ಧಾರಾವಾಹಿಯಲ್ಲಿ ನಟಿಸಿದ್ದರು.

ಕಿರುತೆರೆ ಜೊತೆಗೆ ಬೆಳ್ಳಿತೆರೆಯಲ್ಲಿಯೂ ಕಾಣಿಸಿಕೊಂಡಿದ್ದ ನಯನಾ, ಸಿದ್ದಾರ್ಥ', 'ಲಿಮಿಟ್', 'ಅಲೆಮಾರಿ', 'ಅಯೋಧ್ಯಪುರಂ' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. 2018ರಲ್ಲಿ ಚರಣ್ ಜೊತೆ ನಯನಾ ಮದುವೆ ನೆರವೇರಿತ್ತು. ಕನ್ನಡ ಚಿತ್ರರಂಗದ ಅನೇಕರು ಈ ಮದುವೆಗೆ ಆಗಮಿಸಿ ಈ ಜೋಡಿಗೆ ಶುಭ ಕೋರಿದ್ದರು. ಚರಣ್ ವಿಜ್ಞಾನಿಯಂತೆ. ಪ್ರಸ್ತುತ ಅವರು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ.