ಐ ಮಿಸ್‌ ಯೂ ಚಿರು: ಮತ್ತೆ ಅಣ್ಣನ ನೆನಪಿಗೆ ಜಾರಿದ ಸಹೋದರ.. ಧ್ರುವ ಅಣ್ಣನನ್ನು ನೆನೆಯಲು ಕಾರಣವೇನು ಗೊತ್ತಾ..?

Updated: Monday, September 13, 2021, 15:43 [IST]

ಚಿರಂಜೀವಿ ಸರ್ಜಾ ನಮ್ಮನಗಲಿ ಈಗಾಗಲೇ ಒಂದು ವರ್ಷ ಕಳೆದಿದೆ. 2020ರ ಜೂನ್‌ 7ರಂದು ಬಾರದ ಲೋಕಕ್ಕೆ ತೆರಳಿದರು. ಅಂದು ಇಡೀ ಕರುನಾಡೇ ಕಂಬನಿ ಮಿಡಿದಿತ್ತು. ಸರ್ಜಾ ಕುಟುಂಬ ಮಗನನ್ನು ಕಳೆದುಕೊಂಡ ದುಖಃದ ಕತ್ತಲೆಗೆ ಜಾರಿದ್ದರು. ಕತ್ತಲೆ ತುಂಬಿದ್ದ ಮನೆಗೆ ಚಿರಂಜೀವಿ ಮಗ ಜೂ.ಚಿರು ಎಂಟ್ರಿಕೊಟ್ಟು ನಗುವಿನ ಅಲೆ, ಬೆಳದಿಂಗಳನ್ನು ಚೆಲ್ಲಿದ್ದ. ಇತ್ತೀಚೆಗಷ್ಟೇ ಜೂ. ಚಿರು ಗೆ ರಾಯನ್‌ ರಾಜ್‌ ಸರ್ಜಾ ಎಂದು ನಾಮಕರಣ ಮಾಡಲಾಯ್ತು. 11 ತಿಂಗಳ ರಾಯನ್‌ ಈಗ ತಾತ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಜೊತೆ ಆಡಿ ನಲಿಯುತ್ತಿದ್ದಾನೆ. 
 
ಇನ್ನು ಮಗನ ಹೆಸರಿನ ಬಗ್ಗೆ ಮಾತನಾಡಿದ್ದ ಮೇಘನಾ ರಾಜ್‌, ಕತ್ತಲೆಯಲ್ಲಿದ್ದ ನಮಗೆ ಬೆಳಕು ಕೊಟ್ಟ. ಅವನಿಂದ ನಮ್ಮೆರಡೂ ಮನೆಯಲ್ಲಿ ನಗು, ಖುಷಿ, ಸಂತಸ ಮನೆ ಮಾಡಿದೆ. ಅವನು ಎಂದಿಗೂ ರಾಯನ್.‌ ಹಾಗಾಗಿ ಅವನಿಗೆ ಈ ಹೆಸರು ಇಟ್ಟಿದ್ದೇವೆ ಎಂದು ಹೇಳಿದ್ದರು. ಆದರೆ ಅದೇಕೋ, ಧ್ರುವ ಸರ್ಜಾ ಇದ್ದಕ್ಕಿದ್ದಂತೆ ಮತ್ತೆ ಅಣ್ಣನ ನೆನೆಪಿಗೆ ಜಾರಿದ್ದಾರೆ. ಐ ಮಿಸ್‌ ಯೂ ಚಿರು ಎಂದು ನೆನೆದು ತಮ್ಮ ಸಹೋದರನೊಂದಿಗಿನ ಫೋಟೋಗಳ ವೀಡಿಯೋವನ್ನು ಶೇರ್‌ ಮಾಡಿಕೊಂಡಿದ್ದಾರೆ. ಧ್ರೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ವೀಡಿಯೋಗೆ ಅಭಿಮಾನಿಗಳು ಕಮೆಂಟ್‌ ಮಾಡುತ್ತಿದ್ದಾರೆ. 
 
ಇತ್ತೀಚೆಗಷ್ಟೇ ಮೇಘನಾ ಚಿರಂಜೀವಿ ಜೊತೆಗೆ ಐಫೆಲ್ ಟವರ್ ಗೆ ಹೋಗಿದ್ದನ್ನು ನೆನೆದು ಇನ್ ಸ್ಟಾಗ್ರಂನಲ್ಲಿ ಫೋಟೋವನ್ನು ಹಂಚಿಕೊಂಡಿದ್ದರು. 'ಐ ಲವ್ ಯೂ, ಕಮ್ ಬ್ಯಾಕ್' ಎಂದು ಕ್ಯಾಪ್ಶನ್ ನೀಡಿದ್ದರು. ಈ ಪೋಸ್ಟ್ ಕಂಡು ಅನೇಕರು ಭಾವುಕರಾಗಿ ಪ್ರತಿಕ್ರಿಯೆ ನೀಡಿದ್ದರು. ಇನ್ನೂ ಕೆಲವರು ಚಿರು ಮತ್ತೆ ಬರಲಿ ಎಂದು ಆಶಿಸುತ್ತೇವೆ, ನಿಮ್ಮಿಬ್ಬರನ್ನು ಸದಾ ಪ್ರೀತಿ ಮಾಡುತ್ತೇವೆ, ಚಿಂತಿಸಬೇಡಿ ಎಂದು ಕೂಡ ಕೆಲವರು ಮೇಘನಾ ಪೋಸ್ಟ್ಗೆ ಕಾಮೆಂಟ್ ಮಾಡಿದ್ದರು.  ಆಗಾಗ ಮೇಘನಾ ಚಿರುವನ್ನು ನೆನೆದು ಬೇಸರದಲ್ಲಿರುತ್ತಾರೆ. 
 
ಚೀರು ಸಾವನ್ನಪ್ಪಿದ ನಾಲ್ಕೇ ತಿಂಗಳಲ್ಲಿ ರಾಯನ್‌ ಜನಿಸಿದ್ದ. 2020ರ ಅಕ್ಟೋಬರ್ 22ರಂದು ಬೆಳಗ್ಗೆ 11 ಗಂಟೆ 7 ನಿಮಿಷಕ್ಕೆ ಜೂನಿಯರ್ ಚಿರು ಜನಿಸಿದ್ದು, ಎಲ್ಲರಲ್ಲೂ ಸಂತಸ ತಂದಿದ್ದ. ಇದೀಗ ಮನೆಯಲ್ಲಿ ಮಗು ಜೊತೆ ಮೇಘನಾ ರಾಜ್, ಸುಂದರ್ ರಾಜ್, ಪ್ರಮೀಳಾ ಜೋಶಾಯಿ ಆಡಿ ನಲಿಯುತ್ತಿದ್ದಾರೆ. ಆದರೆ, ಕಳೆದ ವರ್ಷವಷ್ಟೇ ಮೇಘನಾ ರಾಜ್ ಪತಿ ಚಿರಂಜೀವಿ ಸರ್ಜಾ ನಿಧನ ಹೊಂದಿದರು. ಆ ಸಮಯದಲ್ಲಿ ಮೇಘನಾ ರಾಜ್ ಗರ್ಭಿಣಿಯಾಗಿದ್ದರು.