ವರನಟನ ಡಾ.ರಾಜಕುಮಾರ್ ಸ್ಮರಣೆಯ ದಿನದಂದು ಕುಟುಂಬದವರ ಆಚರಣೆ ಹೀಗಿದೆ ನೋಡಿ
Updated:Tuesday, April 12, 2022, 15:14[IST]

ಇಂದು ಮಂಗಳವಾರ(ಏಪ್ರಿಲ್ 12) ಕನ್ನಡದ ವರನಟ, ನಟ ಸಾರ್ವಭೌಮ, ಅಭಿಮಾನಿಗಳ ಪ್ರೀತಿಯ ಅಣ್ಣಾವ್ರು ಡಾ ರಾಜ್ ಕುಮಾರ್ ಅವರ ಪುಣ್ಯತಿಥಿ. ಅವರ ನೆನಪಿನ ದಿನ. ಅವರು ಅಗಲಿ ಇಂದಿಗೆ 16 ವರ್ಷಗಳಾಗಿವೆ. ಅದು 2006ರ ಏ.12, ಇಡೀ ಕರುನಾಡು ಕಣ್ಣೀರಿನಲ್ಲಿ ಮುಳುಗಿದ ದಿನ.
ಡಾ.ರಾಜಕುಮಾರ್ ಅಭಿನಯದ ಭಕ್ತ ವಿಜಯ ಕನ್ನಡ ಚಿತ್ರಕ್ಕೆ ಮೊಟ್ಟ ಮೊದಲ ಫಿಲಂ ಫೇರ್ ಪ್ರಶಸ್ತಿ ತಂದುಕೊಟ್ಟ ಚಿತ್ರ. ರಾಯರಸೊಸೆ ಪ್ರಥಮ ಸಾಮಾಜಿಕ ಚಿತ್ರವೆನಿಸಿಕೊಂಡಿತು. ಡಾ.ರಾಜ್ ಅಭಿನಯದ ನಂದಾದೀಪ ಚಿತ್ರವಂತೂ ಆ ಕಾಲದಲ್ಲಿ 5 ಕೇಂದ್ರಗಳಲ್ಲಿ ಶತದಿನೋತ್ಸವವನ್ನು ಆಚರಿಸಿ ರಾಷ್ಟ್ರಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಚಿತ್ರ. ಸರ್ವಮಂಗಳ ಚಿತ್ರ ತೃತೀಯ ರಾಜ್ಯಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಸಿಪಾಯಿರಾಮು 25 ವಾರಗಳನ್ನು ಪೂರೈಸಿ ತೃತೀಯ ಅತ್ಯುತ್ತಮ ಚಿತ್ರವಾಗಿ ರಾಜ್ಯಪ್ರಶಸ್ತಿಯನ್ನು ಗಳಿಸಿತು. ಆನಂತ್ರ ಬಿಡುಗಡೆಯಾದ ಬಂಗಾರದ ಮನುಷ್ಯ 104 ವಾರಗಳು ತೆರೆಕಂಡಿದೆ. ಡಾ. ರಾಜಕುಮಾರ್ ಕಲಾಪಯಣದಲ್ಲಿ ಅಭಿನಯಿಸಿದ ಒಟ್ಟು ಚಿತ್ರಗಳು 206.
ಇವರಿಗೆ ಸಂದ ಪ್ರಶಸ್ತಿಗಳ ಸಂಖ್ಯೆ 12 ರಾಷ್ಟ್ರ ಪ್ರಶಸ್ತಿಗಳು, 9 ರಾಜ್ಯ ಪ್ರಶಸ್ತಿಗಳು, ಫಿಲಂಫೇರ್ ಪ್ರಶಸ್ತಿಗಳು, ವಿಶ್ವಮಾನ್ಯತೆಯಿಂದ ನೀಡುವ ಭಾರತದಲ್ಲಿ ಪ್ರಪ್ರಥಮವಾಗಿ ಕೆಂಟಕಿ ಕರ್ನಲ್, ರಾಷ್ಟ್ರಪ್ರಶಸ್ತಿಯ ಅತ್ಯುನ್ನತ ಗೌರವವಾದ ಪದ್ಮಭೂಷಣ, ಡಾಕ್ಟರೆಟ್, ಅಲ್ಲದೆ, ದಾದಾಸಾಹೇಬ್ ಫಾಲ್ಕೆ, ಕರ್ನಾಟಕ ನಟ ಸಾರ್ವಭೌಮ ಪ್ರಶಸ್ತಿ, ಕನ್ನಡ ಕಂಠೀರವ, ಗಾನಗಂಧರ್ವ, ಕಲಾಕೌಸ್ತುಭ ಮುಂತಾದವು. ಕರ್ನಾಟಕ ಸರ್ಕಾರವು ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನ ಡಾ.ರಾಜ್ ಪಡೆದಿದ್ದಾರೆ. ಇಷ್ಟೊಂದು ಪ್ರಶಸ್ತಿಗಳನ್ನು ಪಡೆದ ವಿಶ್ವದ ಏಕೈಕ ವ್ಯಕ್ತಿ ಇವರು.
ಇಂದು ಬೆಳಗ್ಗೆ ಡಾ ರಾಜ್ ಕುಮಾರ್ ಕುಟುಂಬಸ್ಥರು ಕಂಠೀವರ ಸ್ಟುಡಿಯೊ ಬಳಿ ಆಗಮಿಸಿ ಡಾ ರಾಜ್ ಸಮಾಧಿಗೆ ಪೂಜೆ, ನಮನ ಸಲ್ಲಿಸಿದರು.ರಾಜ್ ಕುಮಾರ್ ಗೆ ಇಷ್ಟವಾದ ಮುದ್ದೆ, ಚಿಕನ್ ಬಿರಿಯಾನಿ, ಹಲವು ಸಿಹಿ ತಿಂಡಿ ತಿನಿಸುಗಳನ್ನು ಇಡುವ ಮೂಲಕ ದೊಡ್ಮನೆಯ ಇಡೀ ಕುಟುಂಬ ವರನಟನ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಇದರ ಜೊತೆಗೆ ಪಾರ್ವತಮ್ಮ ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಸಮಾಧಿಗೂ ಕುಟುಂಬಸ್ಥರು ಪೂಜೆ ಸಲ್ಲಿಸಿದರು.
ಮಾತನಾಡಿದ ನಟ ಶಿವರಾಜ್ ಕುಮಾರ್, ನಮ್ಮ ಹೆಸರಿನ ಜೊತೆ ಅವರ ಹೆಸರು ಇರುವುದರಿಂದ ನಾವು ಅವರೊಳಗೆ ಒಂದಾಗಿದ್ದೇವೆ.ತಂದೆಯ ಬಗ್ಗೆ ಮಾತನಾಡದ ದಿನಗಳಿಲ್ಲ. ಅಮ್ಮ-ಪುನೀತ್ ಕೂಡ ಈಗ ಇಲ್ಲದೆ ನೋವು ಹೆಚ್ಚಾಗಿದೆ. ನೋವಿನ ಮಧ್ಯೆ ಜೀವನ ಮುಂದುವರಿಯಬೇಕು. ಅವರನ್ನು ಜೀವಂತವಾಗಿಡಲು ಅಭಿಮಾನಿಗಳು, ಗಣ್ಯರು, ಚಿತ್ರರಂಗದವರು ಸಹಾಯ ಮಾಡುತ್ತಿದ್ದಾರೆ ಎಂದರು.
ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ ಅಪ್ಪಾಜಿ ತೀರಿಕೊಂಡು ಇಷ್ಟು ವರ್ಷಗಳಾದ ಮೇಲೆಯೂ ಅಭಿಮಾನಿಗಳ ಪ್ರೀತಿ, ವಿಶ್ವಾಸ ಹಾಗೆಯೇ ಇದೆ, ಅಭಿಮಾನಿಗಳಿಂದ ಅಪ್ಪಾಜಿಗೆ ಪೂಜೆ ಸಲ್ಲಿಸುವುದು ನಿಜವಾದ ಪ್ರೀತಿ ಸಲ್ಲಿಕೆ ಎಂದರು.
ಸಂಗೀತ ಕಲಿಯದೆಯೂ ಹಾಡುಗಳ ಮೂಲಕ ಕೇಳುಗರ ಹೃದಯ ಗೆದ್ದ ಮಹಾನ್ ಗಾಯಕ ಅವರು. ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ನಾಯಕ ನಟ ನಮ್ಮ ಹೆಮ್ಮೆಯ ಡಾ. ರಾಜಕುಮಾರ್ ಅವರಿಗೆ ಕೋಟಿ ನಮನ. ( video credit :tv 9 kannada )