ಮತ್ತೆ ಒಂದಾದ ಲವ್ ಮಾಕ್ಟೇಲ್ ಮಿಲನಾ- ಕೃಷ್ಣ ಜೋಡಿ! ಹೊಸ ಸಿನಿಮಾದ ಹೆಸರೇನು ಗೊತ್ತೆ ?
Updated:Saturday, May 28, 2022, 09:25[IST]

ಸ್ಯಾಂಡಲ್ವುಡ್ನ ತಾರಾ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಮತ್ತೆ ಜೋಡಿಯಾಗಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಲವ್ ಮಾಕ್ಟೇಲ್ 2' ಯಶಸ್ಸಿನ ಸಂತಸದಲ್ಲಿರುವ ಈ ಜೋಡಿ ಮತ್ತೊಂದು ಚಿತ್ರದಲ್ಲಿ ತೆರೆ ಹಂಚಿಕೊಳ್ಳುವುದು ಸಿನಿ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ.ಈಗಾಗಲೇ ಈ ಸಿನಿಮಾಕ್ಕೆ 'ಲವ್ ಬರ್ಡ್ಸ್' ಎಂದು ಹೆಸರಿಡಲಾಗಿದೆ. ಚಿತ್ರದ ನಾಯಕ ನಟನ ಪಾತ್ರಕ್ಕೆ ಡಾರ್ಲಿಂಗ್ ಕೃಷ್ಣ ಅವರನ್ನು ಫೈನಲ್ ಮಾಡಿದ್ದ ಚಿತ್ರ ತಂಡ, ನಾಯಕ ನಟಿಗಾಗಿ ಹುಡುಕಾಟ ನಡೆಸಿತ್ತು. ಇದೀಗ ನಟಿಯ ಪಾತ್ರಕ್ಕೆ ಮಿಲನಾ ನಾಗರಾಜ್ ಅವರನ್ನೇ ಆಯ್ಕೆ ಮಾಡಿದೆ. ಚಿತ್ರವನ್ನು ಕಡ್ಡಿಪುಡಿ ಚಂದ್ರು ಅವರು ನಿರ್ಮಾಣ ಮಾಡುತ್ತಿದ್ದು, ಪಿಸಿ ಚಂದ್ರಶೇಖರ್ ಅವರು ಚಿತ್ರಕ್ಕೆ ಆಯಕ್ಷನ್, ಕಟ್ ಹೇಳುತ್ತಿದ್ದಾರೆ.
ಲವ್ ಬರ್ಡ್ಸ್ ಮ್ಯೂಸಿಕಲ್ ಲವ್ ಸ್ಟೋರಿ ಆಗಿದ್ದು, ಇದರಲ್ಲಿ ನಾಯಕ ಮತ್ತು ನಾಯಕಿಯ ಕೋಪ, ಪ್ರೀತಿ, ಸಂತೋಷವನ್ನು ವ್ಯಕ್ತಪಡಿಸುವಂತಹ ಹಾಡುಗಳಿವೆ. ಚಿತ್ರದ ಚಿತ್ರೀಕರಣ ಮೇ.30 ರಿಂದ ಆರಂಭವಾಗುತ್ತಿದ್ದು, ಸುಮಾರು 55 ದಿನಗಳ ಕಾಲ ಚಿತ್ರೀಕರಣ ಮುಂದುವರೆಯಲಿದೆ. ಚಿತ್ರೀಕರಣಕ್ಕೆ 18 ಪ್ರದೇಶಗಳನ್ನು ಫೈನಲ್ ಮಾಡಲಾಗಿದೆ.
'ನಾವು ಲವ್ ಮಾಕ್ಟೇಲ್ ಸಿನಿಮಾ ಮಾಡಿದಾಗಿನಿಂದಲೂ ಸಹ ಹಲವು ಸಿನಿಮಾಗಳ ಆಫರ್ ಬರುತ್ತಲೇ ಇವೆ. ಈ ಕಥೆ ನನಗೆ ಇಷ್ಟವಾಯಿತು. ಜತೆಗೆ ಪಿ. ಸಿ. ಶೇಖರ್ ಸಿನಿಮಾಗಳನ್ನು ಉತ್ತಮವಾಗಿ ನಿರೂಪಿಸುತ್ತಾರೆ. ಈ ಕಾರಣದಿಂದಾಗಿ ನಾನು 'ಲವ್ ಬರ್ಡ್ಸ್' ಸಿನಿಮಾ ಮಾಡಲು ಒಪ್ಪಿಕೊಂಡಿದ್ದೇನೆ ಎಂದು ನಟಿ ಮಿಲನಾ ನಾಗರಾಜ್ ಹೇಳಿದ್ದಾರೆ.