ನಿತ್ಯಾನಂದ ಕಾಲಿಡೋ ತನಕ ಭಾರತದಿಂದ ಕೊರೋನಾ ಹೋಗಲ್ವಂತೆ !

Updated: Friday, June 11, 2021, 16:46 [IST]

ಭಾರತ ಮಾತ್ರವಲ್ಲದೇ ಇಡೀ ವಿಶ್ವವನ್ನೇ ಬೆಂಬಿಡದೆ ಕಾಡುತ್ತಿರುವ ಕೊರೋನಾ ಮಹಾಮಾರಿ, ಜನರ ಜೀವವನ್ನು ಹಿಂಡಿ ಹಿಪ್ಪೆ ಮಾಡಿದೆ. ಕೋವಿಡ್​ ಬಿಕ್ಕಟ್ಟನ್ನು ಎದುರಿಸುತ್ತಿರುವ ಭಾರತ ನೆರೆಯ ರಾಷ್ಟ್ರಗಳಿಂದ ಸಹಾಯವನ್ನೂ ಪಡೆದಿದೆ. ವೈದ್ಯರು ಹಗಲಿರುಳೆನ್ನದೇ ಶ್ರಮಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಹೊಸ ವಿಡಿಯೋವನ್ನು ಹರಿಬಿಟ್ಟು ಅದರಲ್ಲಿ ಕೊರೋನಾ ಕುರಿತಾಗಿ ಮಾತನಾಡಿದ್ದಾರೆ.

 

ಸದಾ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಗೆ ಗ್ರಾಸವಾಗುವ ನಿತ್ಯಾನಂದ ಈ ಬಾರಿಯೂ ಸಾಕಷ್ಟು ಚರ್ಚೆಯಲ್ಲಿದ್ದಾರೆ. ನಾನು ಭಾರತಕ್ಕೆ ಕಾಲಿಟ್ಟಾಗ ಮಾತ್ರ ಕೊರೋನಾ ಅಂತ್ಯ ಕಾಣುತ್ತದೆ ಎಂದು ನಿತ್ಯಾನಂದ ಆ ವಿಡಿಯೋದಲ್ಲಿ ಹೇಳಿದ್ದಾರೆ. ಜೊತೆಗೆ ಪಾದಯಾತ್ರೆಯನ್ನು ಮಾಡಬೇಕು ಎಂಬುದಾಗಿ ನಿತ್ಯಾನಂದ ವಿಡಿಯೋದಲ್ಲಿ ಹೇಳಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.

ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಸ್ವಯಂ ಘೋಷಿತ ದೇವಮಾನವ 2019ರಲ್ಲಿ ಭಾರತದಿಂದ ಪರಾರಿಯಾಗಿದ್ದರು. ಬಳಿಕ ಈಕ್ವೆಟಾರ್ ಕರಾವಳಿಯಲ್ಲಿ ಕೈಲಾಸ ಎಂದು ಕರೆಯಲಾಗುವ ವರ್ಚುಯಲ್ ಐಲ್ಯಾಂಡ್​ನ್ನು ಕಟ್ಟಿರುವುದಾಗಿ ಹೇಳಿಕೊಂಡಿದ್ದರು. ನಿತ್ಯಾನಂದ ಆಗಾಗ್ಗೆ ವಿಡಿಯೋಗಳನ್ನು ಬಿಡುಗಡೆ ಮಾಡಿ, ಕೈಲಾಸಕ್ಕೆ ಬನ್ನಿ ಎಂದು ಆಹ್ವಾನಿಸುತ್ತಿದ್ದರು. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗುತ್ತಿದ್ದವು. ನೆಟ್ಟಿಗರು ನಿತ್ಯಾನಂದರನ್ನು ಟ್ರೋಲ್ ಮಾಡುವುದು ಸರ್ವೇ ಸಾಮಾನ್ಯವಾಗಿತ್ತು.

ಇಷ್ಟು ಮಾತ್ರವಲ್ಲದೇ, ನಿತ್ಯಾನಂದ ಕೈಲಾಸವನ್ನು ಪ್ರತ್ಯೇಕ ದೇಶವೆಂದು ಘೋಷಿಸಿ ಎಂದು ವಿಶ್ವಸಂಸ್ಥೆಗೆ ಮನವಿಯನ್ನೂ ಮಾಡಿದ್ದರು. ಕೈಲಾಸಕ್ಕಾಗಿಯೇ ಒಂದು ವೆಬ್​ಸೈಟ್​​ನ್ನು ಕೂಡ ರಚಿಸಿದ್ದರು. ಜೊತೆಗೆ ಕೈಲಾಸದಲ್ಲಿ ರಿಸರ್ವ್​ ಬ್ಯಾಂಕ್ ಅನ್ನು ತೆರೆಯಲಾಗಿದೆ. ಹೊಸ ಕರೆನ್ಸಿಗಳನ್ನು ಪರಿಚಯಿಸಲಾಗಿದೆ ಎಂದು ವಿಡಿಯೋ ಮೂಲಕ ನಿತ್ಯಾನಂದ ಹೇಳಿದ್ದರು.

ಬಳಿಕ ಏಪ್ರಿಲ್​ ತಿಂಗಳಿನಲ್ಲಿ ಕೊರೋನಾ ಎರಡನೇ ಅಲೆಯ ಆರ್ಭಟ ಹೆಚ್ಚಾಗಿದ್ದರಿಂದ, ಭಾರತದ ಭಕ್ತರಿಗೆ ತನ್ನ ಕೈಲಾಸವನ್ನು ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಎಂದೂ ಕೂಡ ನಿತ್ಯಾನಂದ ಹೇಳಿಕೊಂಡಿದ್ದರು. ಭಾರತದ ಜೊತೆಗೆ ಬ್ರೆಜಿಲ್, ಯುರೋಪ್ ಮತ್ತು ಮಲೇಷ್ಯಾವನ್ನು ಆ ಪಟ್ಟಿಗೆ ಸೇರಿಸಿದ್ದಾರೆ.ಒಟ್ಟಾರೆ ಕೋವಿಡ್​ ಬಿಕ್ಕಟ್ಟಿನ ಸಂದರ್ಭದಲ್ಲಿ ಸ್ವಯಂ ಘೋಷಿತ ದೇವಮಾನವ ಇಂತಹ ಹೇಳಿಕೆ ಕೊಟ್ಟಿರುವುದು ನಿಜಕ್ಕೂ ಹಾಸ್ಯಾಸ್ಪದ. ದೇಶವು ಗಂಭೀರ ಸ್ಥಿತಿಯಲ್ಲಿರುವಾಗ, ಕೊರೋನಾ ಮಹಾಮಾರಿಯನ್ನು ಎದುರಿಸುವಾಗ, ನಿತ್ಯಾನಂದ ನಾನು ಭಾರತಕ್ಕೆ ಕಾಲಿಟ್ಟರೆ ಕೊರೋನಾ ಮಾಯಾವಾಗುತ್ತದೆ ಎಂದು ಹೇಳಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಕೆಲ ನೆಟ್ಟಿಗರು ಹೇಳಿದರೆ, ಮತ್ತೆ ಕೆಲವರು ಕೊರೋನಾ ಮಹಾಮಾರಿಯನ್ನು ಕಟ್ಟಿಹಾಕಲು ನಿಜಕ್ಕೂ ನಿತ್ಯಾನಂತ ಭಾರತಕ್ಕೆ ಬರುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.