ಅವತಾರಪುರುಷ ಸಿನಿಮಾದ ಅವತಾರ ಹೇಗಿದೆ ? ಇಲ್ಲಿದೆ ಜನರ ಅಭಿಪ್ರಾಯ
Updated:Friday, May 6, 2022, 19:05[IST]

ನಟ ಶರಣ್ ಅಭಿನಯದ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿರುವ ಅವತಾರ ಪುರುಷ ಸಿನಿಮಾ ಎರಡು ಪಾರ್ಟ್ನಲ್ಲಿ ಮೂಡಿಬಂದಿದ್ದು ಮೊದಲ ಪಾರ್ಟ್ ಈಗ ಬಿಡುಗಡೆ ಆಗಿದೆ. ಎರಡನೇ ಪಾರ್ಟ್ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಸಿನಿಮಾ ನೋಡಿದ ಪ್ರೇಕ್ಷಕರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಇನ್ನು ಒಟ್ಟಾರೆ ಈ ಸಿನಿಮಾದ ವಿಮರ್ಶೆ ಮತ್ತು ಪ್ರೇಕ್ಷಕರ ಅಭಿಪ್ರಾಯ ಇಲ್ಲಿದೆ ನೋಡಿ.
ಶರಣ್ ಅವರು ಜ್ಯೂನಿಯರ್ ಆರ್ಟಿಸ್ಟ್ ಆಗಿ ಒದ್ದಾಡುವ ಅನಿಲನಾಗಿ ಮಿಂಚಿದ್ದಾರೆ. ಅವರ ಕಾಮಿಡಿ ಪಂಚ್ ಸಖತ್ ಆಗಿದೆ. ಅಮ್ಮನ ಜತೆಗಿನ ಸೆಂಟಿಮೆಂಟ್ ದೃಶ್ಯಗಳಲ್ಲಿ ಉತ್ತಮ ನಟನೆ ತೋರಿದ್ದಾರೆ. ನಟಿ ಆಶಿಕಾ ರಂಗನಾಥ್ ಹೆಚ್ಚು ಗ್ಲಾಮರಸ್ ಆಗಿ ಕಾಣಿಸಿಕೊಳ್ಳದೆ ಸಿಂಪಲ್ ಲುಕ್ನಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಸಾಯಿ ಕುಮಾರ್ ಪಾತ್ರ ಮತ್ತು ಕೊನೆಯಲ್ಲಿ ಬರುವ ಶ್ರೀನಗರ ಕಿಟ್ಟಿ ಪಾತ್ರ ಸಕ್ಕತ್ತಾಗಿ ಮೂಡಿಬಂದಿದೆ.
ಸಿಂಪಲ್ ಸುನಿ ಸಿನಿಮಾದಲ್ಲಿ ಕಾಮಿಡಿಗೆ ಹೆಚ್ಚು ಆದ್ಯತೆ. ಈ ಸಿನಿಮಾದಲ್ಲೂ ಅದು ಮುಂದುವರಿದಿದೆ. ಮೊದಲಾರ್ಧ ಅನೇಕ ದೃಶ್ಯಗಳು ನಗಿಸುತ್ತ ಸಾಗುತ್ತವೆ. ದ್ವಿತಿಯಾರ್ಧ ಕೊಂಚ ಗಂಭೀರತೆ ಪಡೆದುಕೊಳ್ಳುತ್ತದೆ. ಪಂಚಿಂಗ್ ಡೈಲಾಗ್ಗಳು ಸಿನಿಮಾದ ತೂಕವನ್ನು ಹೆಚ್ಚಿಸಿದೆ. ತಂತ್ರ-ಮಂತ್ರ ಹಾಗೂ ಹಾಸ್ಯವನ್ನು ಹದವಾಗಿ ಬೆರೆಸಿ ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ. ಸಂಗೀತ ಮತ್ತು ಹಿನ್ನೆಲೆ ಸಂಗೀತದಲ್ಲೂ ಅರ್ಜುನ್ ಜನ್ಯ ಗಮನ ಸೆಳೆಯುತ್ತಾರೆ.
ಕಥೆಯ ಎಳೆ ಫ್ಲ್ಯಾಶ್ಬ್ಯಾಕ್ನಿಂದ ಆರಂಭವಾಗುವ ಕಾರಣ ಕೆಲಹೊತ್ತು ಸಿನಿಮಾ ನಿಧಾನಗತಿಯಿಂದ ನಂತರ ಓಡುತ್ತದೆ. ತಾಯಿ ಸೆಂಟಿಮೆಂಟ್ನೊಂದಿಗೆ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಜೊತೆ ಮಾಟ ಮಂತ್ರದ ಹಾರರ್ ಟಚ್ ಸಹ ಇದೆ. ಸಿಂಪಲ್ ಸುನಿಯವರ ಚಿತ್ರದಲ್ಲಿ ಇದುವರೆಗೂ ಕಾಣದ ವಿಭಿನ್ನ ಆಯಾಮಗಳು ಚಿತ್ರದಲ್ಲಿದೆ. ಲವ್, ಕಾಮಿಡಿ, ಡ್ರಾಮಾ ಎಲ್ಲದರ ಮಿಶ್ರಿತ ಹೂರಣ ಚಿತ್ರವಿದು.