ಅಪ್ಪಾಜಿ ಹುಟ್ಟೂರಲ್ಲಿ ಚಿತ್ರ ನಿರ್ಮಾಣ: ರಾಘಣ್ಣ ನಟನೆಯ ಚಿತ್ರದ ಶೂಟಿಂಗ್ ಶುರು

By Infoflick Correspondent

Updated:Thursday, March 10, 2022, 14:29[IST]

ಅಪ್ಪಾಜಿ ಹುಟ್ಟೂರಲ್ಲಿ ಚಿತ್ರ ನಿರ್ಮಾಣ: ರಾಘಣ್ಣ ನಟನೆಯ ಚಿತ್ರದ ಶೂಟಿಂಗ್ ಶುರು

ಚಾಮರಾಜನಗರದ ಗಾಜನೂರು ಡಾ. ರಾಜ್ಕುಮಾರ್ ಅವರ ಹುಟ್ಟೂರು. ಡಾ.ರಾಜ್ ಕುಮಾರ್ ಅವರು ಅತೀ ಹೆಚ್ಚು ಸಮಯವನ್ನು ತಮ್ಮ ಹುಟ್ಟೂರು ಗಾಜನೂರಿನಲ್ಲಿ ಕಳೆಯಲು ಬಯಸುತ್ತಿದ್ದರು. ಮಕ್ಕಳಿಗೆ ಬೇಸಿಗೆ ರಜೆ ಬಂದಾಗ ಡಾ.ರಾಜ್ ಕುಮಾರ್ ಅವರು ತಮ್ಮ ಮಕ್ಕಳನ್ನು ಕರೆದುಕೊಂಡು ಗಾಜನೂರಿಗೆ ಬಂದು ಬಿಡುತ್ತಿದ್ದರು. ಸುಮಾರು ಎರಡು ತಿಂಗಳ ಕಾಲ ಗಾಜನೂರಿನಲ್ಲೇ ಕಳೆಯುತ್ತಿದ್ದರು. ಆದರೆ, ಡಾ.ರಾಜ್ ಕುಮಾರ್ ಅವರು ಹುಟ್ಟಿ ಬೆಳೆದ ಗಾಜನೂರಿನ ಮನೆ ಮಳೆಗೆ ಹಾಳಾಗಿತ್ತು.

ಇದೀಗ ರಾಜ್ ಕುಮಾರ್ ಕುಟುಂಬ, ಅಪ್ಪ ಹುಟ್ಟಿ ಬೆಳೆದ ಮನೆಯನ್ನು ಸರಿಮಾಡಿಸಿದ್ದಾರೆ. ಗಾಜನೂರಿನಲ್ಲಿರುವ ಮನೆಯನ್ನು ನವೀಕರಿಸಿ ಅಲ್ಲಿ ಪುನೀತ್ ರಾಜ್ ಕುಮಾರ್ (Puneeth Rajkumar) , ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ಫೋಟೋ ಇರಿಸಲಾಗಿದೆ. ಮನೆಗೆ ಸುಣ್ಣ ಬಣ್ಣ ಹೊಡೆದಿದ್ದು, ನೋಡಲು ತುಂಬಾ ಚೆನ್ನಾಗಿದೆ. ಇದೀಗ, ಈ ಮನೆಯಲ್ಲಿ ರಾಘವೇಂದ್ರ ರಾಜ್ ಕುಮಾರ್  (Raghavendra Rajkumar)  ಅವರು ತಮ್ಮ ಸಿನಿಮಾದ ಮೊದಲ ದಿನದ ಶೂಟಿಂಗ್ ನಡೆಸುತ್ತಿದ್ದಾರೆ.  ರಾಘಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರದ ಮುಹೂರ್ತವನ್ನು ಗಾಜನೂರಿನ ಮನೆಯಲ್ಲೇ ನಡೆಸಲಾಗಿದೆ. 

ಸದ್ಯ ಗಾಜನೂರಿನಲ್ಲಿ ರಾಘಣ್ಣ ಹಾಗೂ ಚಿತ್ರ ತಂಡ ಬೀಡು ಬಿಟ್ಟಿದ್ದು, ಖಡಕ್ ಹಳ್ಳಿ ಹುಡುಗರು ಎಂಬ ಶೀರ್ಷಿಕೆಯ ಚಿತ್ರದ ಮುಹೂರ್ತವನ್ನು ನೆರವೇರಿಸಲಾಗಿದೆ. ಈಗಾಗಲೇ ಗಾಜನೂರಿನಲ್ಲಿ ಸಂಪತ್ತಿಗೆ ಸವಾಲ್, ಶ್ರೀನಿವಾಸ ಕಲ್ಯಾಣ ಸಿನಿಮಾ ಚಿತ್ರೀಕರಣ ನಡೆದಿದ್ದವು. ಇನ್ನು ಇದೀಗ ಚಿತ್ರದ ಮುಹೂರ್ತವನ್ನು ನೆರವೇರಿಸಿದ್ದು, ಈ ಚಿತ್ರದಲ್ಲಿ ರಾಘಣ್ಣ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ, ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಡಾ ರಾಜ್ ಕುಮಾರ್ ಅವರು ಹುಟ್ಟಿದ ಮನೆ, ಓದಿದ ಶಾಲೆ, ಮಂಟೇಸ್ವಾಮಿ ದೇವಾಲಯದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರ ತಂಡ ಹೇಳಿದದೆ.  

ಇನ್ನು ಚಿತ್ರದ ಹಾಡೊಂದರ ಚಿತ್ರೀಕರಣ ಇಲ್ಲೇ ನಡೆಯಲಿದೆ. ಕನ್ನಡಕ್ಕೆ ಮೊದಲ ಗೌರವ ಎಂಬ ಸಾಲುಗಳಿರುವ ಹಾಡಿನ ಚಿತ್ರೀಕರಣ ಗಾಜನೂರಿನಲ್ಲಿ ನಡೆಯಲಿದೆ. ಇನ್ನು ರಾಘವೇಂದ್ರ ರಾಜ್ ಕುಮಾರ್ ನಟನೆಯ ಮತ್ತೊಂದು ಸಿನಿಮಾ ರಾಜಿ ತೆರೆಕಾಣಬೇಕಿದೆ. ಇದರಲ್ಲಿ ಹರ್ಷಿಕಾ ಪೂಣಚ್ಚ ಕೂಡ ನಟಿಸಿದ್ದಾರೆ. ರಾಜಿ ಚಿತ್ರವನ್ನು ಪ್ರೀತಿ ಎಸ್. ಬಾಬು ನಿರ್ದೇಶಿಸಿದ್ದಾರೆ. ವಸುಮತಿ ಉಡುಪ ಅವರ ಕಥೆ ಆಧರಿಸಿ ರಾಜಿ ಚಿತ್ರ ನಿರ್ಮಾಣವಾಗುತ್ತಿದೆ.