ಶಶಿ ಕುಮಾರ್ ಗೆ ದಶಕಗಳ ಸಂಕಟ: ಸರ್ಕಾರಕ್ಕೆ ವಸೂಲಿ ಮಾಡುವ ಸಂದರ್ಭ

By Infoflick Correspondent

Updated:Sunday, April 24, 2022, 21:30[IST]

ಶಶಿ ಕುಮಾರ್ ಗೆ   ದಶಕಗಳ ಸಂಕಟ:   ಸರ್ಕಾರಕ್ಕೆ ವಸೂಲಿ ಮಾಡುವ ಸಂದರ್ಭ

ಮಾಜಿ ಸಂಸದ, ನಟ ಶಶಿಕುಮಾರ್ ಅವರು ದಶಕಗಳ ಹಿಂದೆ ಯಡವಟ್ಟು ಒಂದನ್ನು ಮಾಡಿಕೊಂಡಿದ್ದಾರೆ. 3.72 ಲಕ್ಷ ರೂ. ಗಳನ್ನು ಶಶಿ ಕುಮಾರ್ ದೆಹಲಿಯ ಕರ್ನಾಟಕ ಭವನಕ್ಕೆ ಪಾವತಿಸಬೇಕಿದೆ. ಈಗ ಈ ಹಣವನ್ನು ಭೂ ಕಂದಾಯ ಎಂದು ಪರಿಗಣಿಸಿರುವ ಸರ್ಕಾರ ವಸೂಲಿ ಮಾಡುವಂತೆ ಆದೇಶಿಸಿದೆ. ಇದು ಈಗ ಶಶಿಕುಮಾರ್ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.  

1999 ರಲ್ಲಿ ಅಂದರೆ ಸುಮಾರು 22 ವರ್ಷಗಳ ಹಿಂದೆ ಶಶಿ ಕುಮಾರ್ ಅವರು ದೆಹಲಿಯ ಕರ್ನಾಟಕ ಭವನದಲ್ಲಿ ಒಟ್ಟು 13 ತಿಂಗಳುಗಳ ಕಾಲ ವಾಸವಿದ್ದರು. ಇದಕ್ಕೆ ಒಟ್ಟು 4,75,200 ರೂಪಾಯಿ ಹಣವನ್ನು ಪಾವತಿಸಬೇಕಿತ್ತು. ಆದರೆ ಕೇಂದ್ರ ಸರ್ಕಾರ ಮೊದಲ 3 ತಿಂಗಳುಗಳ ಕಾಲ ವಾಸವಿದ್ದದ್ದಕ್ಕೆ ಹಣವನ್ನು ಪಾವತಿಸಿ. 1,03,200 ರೂ.ಗಳನ್ನು ಕಟ್ಟಿದೆ. 3 ತಿಂಗಳ ನಂತರ ಶಶಿಕುಮಾರ್ ಅವರಿಗೆ ಬೇರೆ ವಸತಿಯ ವ್ಯವಸ್ಥೆಯನ್ನು ಮಾಡಿಕೊಡಲಾಗಿತ್ತು. ಆದರೆ ಶಶಿಕುಮಾರ್ ಅವರು ಕರ್ನಾಟಕ ಭವನದಲ್ಲಿ ಉಳಿದ 10 ತಿಂಗಳ ಕಾಲ ವಾಸವಿದ್ದರು. ಹೀಗಾಗಿ ಇದರ ಬಿಲ್ 4,75,200 ಇಷ್ಟಾಗಿತ್ತು. 

ಕೇಂದ್ರ ಸರ್ಕಾರ 1,03,200 ರೂ.ಗಳನ್ನು ಪಾವತಿಸಿದ್ದು, ಉಳಿದ 3.72 ಲಕ್ಷವನ್ನು ಶಶಿಕುಮಾರ್ ಅವರೇ ಕಟ್ಟಬೇಕು ಎಂದು ಹೇಳಿತ್ತು. ಆದರೆ ಶಶಿಕುಮಾರ್ ಅವರು ಆಗ ಕಟ್ಟಿರಲಿಲ್ಲ. ಕಳೆದ ೆರಡು ದಶಕಗಳಿಂದಲೂ ಈ ಹಣವನ್ನು ಪಾವತಿಸದೇ ಬಾಕಿ ಉಳಿಸಿಕೊಂಡಿದ್ದರು. ಆದರೆ, 2018ರ ವಿಧಾನಸಭೆ ಚುನಾವಣೆಯಲ್ಲಿ ಶಶಿಕುಮಾರ್ ಅವರು ಪುನಃ ಜಾತ್ಯತೀತ ಜನತಾ ದಳದಿಂದ ಹೊಸದುರ್ಗ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಈ  ಸಂದರ್ಭದಲ್ಲಿ ಶಶಿಕುಮಾರ್ ಅವರು ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ಸುಮಾರು 8.74 ಕೋಟಿ ಆಸ್ತಿ ಬಗ್ಗೆ ಘೋಷಿಸಿಕೊಂಡಿದ್ದರು. ಮನೆ, ನಿವೇಶನ, ಕಾರು, ಚಿನ್ನಾಭರಣಗಳಿರುವುದಾಗಿ ಹೇಳಿದ್ದರು. 

ಇದೀಗ ಬಾಕಿ ಉಳಿದ ಮೊತ್ತವನ್ನು ಭೂ ಕಂದಾಯದ ರೂಪದಲ್ಲಿ ವಸೂಲಿ ಮಾಡುವಂತೆ ಸರ್ಕಾರ ಸೂಚಿಸಿತ್ತು. ಅದರಂತೆ ತನಿಖೆ ನಡೆಸಿದಾಗ ಶಶಿಕುಮಾರ್ ಅವರ ಹೆಸರಲ್ಲಿ ಚಿತ್ರದುರ್ಗದಲ್ಲಿ ಯಾವುದೇ ಆಸ್ತಿ, ಚಿರಾಸ್ತಿ ಇರಲಿಲ್ಲ. ಹೀಗಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಶಶಿಕುಮಾರ್ ಅವರು ವಾಸವಿರುವ ಹಾಗೂ ಅವರ ಆಸ್ತಿಯನ್ನು ಪತ್ತೆ ಹಚ್ಚುವಂತೆ ಸೂಚಿಸಿದ್ದರು. ಅದರಂತೆ ಪತ್ತೆ ಹಚ್ಚಿದ್ದು, ಏಪ್ರಿಲ್ 19ರಂದು ಭೂ ಕಂದಾಯದ ರೂಪದಲ್ಲಿ ವಸೂಲಿ ಮಾಡಲು ಆದೇಶ ಹೊರಡಿಸಲಾಗಿದೆ.