Shivarajkumar : ಪೋಲಿಸರೊಂದಿಗೆ ಹೆಜ್ಜೆ ಹಾಕಿ ತಂಗಿ ಹುಡುಕಾಟದಲ್ಲಿದ್ದೇನೆ ಎಂದು ಶಿವಣ್ಣ ಹೇಳಲು ಕಾರಣವೇನು ?

By Infoflick Correspondent

Updated:Tuesday, May 3, 2022, 08:30[IST]

Shivarajkumar : ಪೋಲಿಸರೊಂದಿಗೆ ಹೆಜ್ಜೆ ಹಾಕಿ ತಂಗಿ ಹುಡುಕಾಟದಲ್ಲಿದ್ದೇನೆ ಎಂದು ಶಿವಣ್ಣ ಹೇಳಲು ಕಾರಣವೇನು ?

ಪುನೀತ್ ಅಗಲಿದ ನೋವು ಎಲ್ಲರ‌ ಮನದಲ್ಲಿದ್ದು ಅದರಿಂದ ಹೊರಬರಲು ಶಿವಣ್ಣ ಹೆಚ್ಚು ಸಾಮಾಜಿಕವಾಗಿ ಬೆರೆಯುತ್ತಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅಭಿಮಾನಿ ದೇವರೊಡನೆ ಸಮಯ ಕಳೆಯುತ್ತಿದ್ದಾರೆ. ಮಂಗಳೂರಿನ ಪೋಲಿಸರು ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಿವಣ್ಣ ಪುನೀತ ಬಗ್ಗೆ ಮಾತನಾಡಿ ಟಗರು 2 ಸಿನಿಮಾದ ಬಗ್ಗೆ ಹಾಗು ತುಳು- ಕನ್ನಡ ಭಾಷೆಯ ಬಗ್ಗೆ ಏನೇನು ಹೇಳಿದ್ದಾರೆ ಇಲ್ಲಿದೆ ನೋಡಿ.  

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವತಿಯಿಂದ ಮಂಗಳೂರಿನಲ್ಲಿ ಆಯೋಜಿಸಿದ್ದ ಪುನೀತ್‌ ರಾಜಕುಮಾರ್ ಸ್ಮರಣೆ ಕಾರ್ಯಕ್ರಮದಲ್ಲಿ ಚಿತ್ರನಟ ಶಿವರಾಜ್‌ಕುಮಾರ್ ಮತ್ತು ಗೀತಾ ದಂಪತಿ ಭಾಗವಹಿಸಿದ್ದರು. ಇಲಾಖೆ ವತಿಯಿಂದ ಶಿವರಾಜ್‌ಕುಮಾರ್ -ಗೀತಾ ದಂಪತಿಯನ್ನು ಸನ್ಮಾನಿಸಲಾಯಿತು. 

ಮಂಗಳೂರು ನನಗೆ ಇಷ್ಟವಾದ ಊರು. ಅಪ್ಪಾಜಿಯನ್ನು ಬಿಟ್ಟರೆ ನಮ್ಮ ಕುಟುಂಬದಲ್ಲಿ ನಾನು ನಟಿಸಿರುವ ಹೆಚ್ಚಿನ ಸಿನಿಮಾಗಳ ಶೂಟಿಂಗ್ ಇಲ್ಲಿ ನಡೆದಿದೆ. ನನಗೂ, ಪೊಲೀಸ್ ಇಲಾಖೆಗೂ ನಿಕಟ ಸಂಬಂಧ. ನಾನು ಪೊಲೀಸ್ ಪಾತ್ರದಲ್ಲಿ ನಟಿಸಿದ ಚಿತ್ರಗಳು ಯಶಸ್ಸು ಪಡೆದಿವೆ.ಮುಂದಿನ ಬಾರಿ ಮಂಗಳೂರಿನಲ್ಲಿ 'ಅಪ್ಪು ಸೆಲೆಬ್ರೇಷನ್' ಮಾಡೋಣ'. ಅಪ್ಪುವನ್ನು ಕಳೆದುಕೊಂಡಿದ್ದು ಅದು ನಮ್ಮ ಕುಟುಂಬಕ್ಕೆ ಮಾತ್ರವಲ್ಲ, ಇಡೀ ರಾಜ್ಯದ ಜನರಿಗೆ ಮರೆಯಲಾಗದ ನೋವು. ಅಪ್ಪು ಇಲ್ಲ ಎಂದು ಕೊರಗುವುದಕ್ಕಿಂತ, ಆತ ನಮ್ಮೊಡನೆ ಇದ್ದಾನೆ ಎಂತಲೇ ನಾವು ಸಂಭ್ರಮಿಸಬೇಕು. ಆ ಮೂಲಕ ನಮ್ಮೊಳಗೆ ಸಮಾಧಾನ ಕಂಡುಕೊಳ್ಳಬೇಕು'. ತುಳು‌ ಬೇರೆ ಅಲ್ಲ, ಕನ್ನಡ ಬೇರೆ ಅಲ್ಲ, ಎಲ್ಲರೂ ಒಟ್ಟಿಗೆ ಇರೋಣ. ಎಂದು ಶಿವರಾಜ್‌ಕುಮಾರ್ ಹೇಳಿದರು. 

ಅಪ್ಪು ನೆನಪಿನಲ್ಲಿ ಶಿವರಾಜ್‌ಕುಮಾರ್, 'ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ..' ಹಾಡಿನ ಕೆಲ ಸಾಲುಗಳನ್ನು ಹಾಡಿದರು. ಶಿವರಾಜ್‌ಕುಮಾರ್ ಅವರು ತನ್ನದೇ ಸಿನೆಮಾಗಳ ಹಾಡಿಗೆ ಸಖತ್ ಹೆಜ್ಜೆ ಹಾಕುವ ಮೂಲಕ ರಂಜಿಸಿದರು. ಮಂಗಳೂರು ಕಮಿಷನರ್ ಶಶಿಕುಮಾರ್ ಹಾಡಿದ ಟಗರು ಹಾಡಿಗೆ ಶಿವಣ್ಣ ಸಖತ್ ಆಗಿ ಸ್ಟೆಪ್ ಹಾಕಿ ಪೊಲೀಸರ ಜೊತೆ ಕಾಲ ಕಳೆದಿದ್ದಾರೆ. 

'ಇನ್‌ಸ್ಪೆಕ್ಟರ್ ವಿಕ್ರಂ'ನಿಂದ 'ರುಸ್ತುಂ'ವರೆಗೆ ಪಾತ್ರಗಳನ್ನು ನಿರ್ವಹಿಸಿದ್ದೀರಿ ಮತ್ತೆ ಅಂತಹ ಪಾತ್ರಗಳನ್ನು ನಿರೀಕ್ಷಿಸಬಹುದೇ ಎಂಬ ಪೊಲೀಸ್ ಅಧಿಕಾರಿಯೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವರಾಜ್ ಕುಮಾರ್, 'ಟಗರು -2' ಆ ಚಿತ್ರ ಆಗಿರಬಹುದು' ಎನ್ನುತ್ತ ಟಗರು-2 ಚಿತ್ದ ಸುಳಿವು ನೀಡಿದರು.  

ಅಣ್ಣತಂಗಿ ಪಾತ್ರದಲ್ಲಿ ಸಾಯಿಪ್ರಕಾಶ್ ಅವರ ಇನ್ನೊಂದು ಕಥೆ ಮಾಡಿದ್ದಾರೆ. ಅದರಲ್ಲಿ ಮೂರು ಕಥೆ ಇದ್ದು, ಅದಕ್ಕೆ ಒಂದೊಳ್ಳೆ ತಂಗಿ ಹುಡುಕ್ತಾ ಇದೀನಿ ಎಂದು ನಟ ಡಾ.ಶಿವರಾಜ್ ಕುಮಾರ್ ಹೇಳಿದ್ದಾರೆ.