Shivraj Kumar : ರಜನಿಕಾಂತ್ ಜೊತೆ ತೆರೆ ಹಂಚಿಕೊಳ್ಳಲಿರುವ ಶಿವಣ್ಣ! ಯಾವ ಸಿನಿಮಾ? ಶಿವರಾಜಕುಮಾರ್ ಹೇಳಿದ್ದೇನು ?
Updated:Friday, June 10, 2022, 14:44[IST]

ಸೂಪರ್ಸ್ಟಾರ್ ರಜನಿಕಾಂತ್ ಹಾಗೂ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಕಾಂಬಿನೇಷನ್ನ ಸಿನಿಮಾ ಸೆಟ್ಟೇರಲಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 169 ಚಿತ್ರವು ಈಗಾಗಲೇ ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಈ ಸಿನಿಮಾವನ್ನು ಫ್ಯಾನ್ ಇಂಡಿಯಾ ಚಿತ್ರವಾಗಿಸುವ ಉದ್ದೇಶ ಹೊಂದಿರುವುದರಿಂದ ನಿರ್ದೇಶಕ ನೆಲ್ಸನ್ ದಿಲೀಪ್ಕುಮಾರ್ ಅವರು ಸ್ಯಾಂಡಲ್ವುಡ್ನ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅವರ ಕಾಲ್ಶೀಟ್ ಅನ್ನು ಪಡೆದುಕೊಂಡಿದ್ದಾರೆ. ರಜನಿಕಾಂತ್ರೊಂದಿಗೆ ಈಗಾಗಲೇ ಐಶ್ವರ್ಯರೈ ನಟಿಸುತ್ತಿದ್ದು ಈಗ ಶಿವಣ್ಣನ ಎಂಟ್ರಿ ಆಗಿರುವುದರಿಂದ ಆ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಮತ್ತಷ್ಟು ಕ್ರೇಜ್ ಹುಟ್ಟುಕೊಂಡಿದೆ.
ಸ್ವತಃ ಶಿವರಾಜ್ ಕುಮಾರ್ ಈ ವಿಷಯದಲ್ಲಿ ದೃಢಪಡಿಸಿದ್ದು, ಹೌದು, ನಾನು ರಜನಿ ಸಾರ್ ಅವರ ಮುಂದಿನ ಚಿತ್ರದಲ್ಲಿ ನಟಿಸುತ್ತಿದ್ದೇನೆ. ರಜನಿ ಸಾರ್ ನನ್ನನ್ನು ಚಿಕ್ಕ ವಯಸ್ಸಿನಿಂದಲೇ ನೋಡಿಕೊಂಡು ಬಂದಿದ್ದಾರೆ. ಅವರ ಜೊತೆ ನಟಿಸುವುದು ಯಾವುದೇ ನಟನಿಗೆ ಆದರೂ ಹೆಮ್ಮೆಯ ವಿಷಯ. ಅಭಿಮಾನಿಗಳು ನಮ್ಮಿಬ್ಬರ ಕಾಂಬಿನೇಷನ್ ಇಷ್ಟಪಡುತ್ತಾರೆ. ಚಿತ್ರ ಅದ್ಭುತವಾಗಿ ಮೂಡಿ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ತಲೈವಾರ್ 169 ಎಂದು ತಾತ್ಕಾಲಿಕವಾಗಿ ಹೆಸರಿಡಲಾಗಿದ್ದು, ಭಾರೀ ಬಜೆಟ್ ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ತಲೈವಾರ್ 169 ಚಿತ್ರ ಬೆಂಗಳೂರು ಮತ್ತು ಮೈಸೂರಿನಲ್ಲಿ ಚಿತ್ರೀಕರಣ ಆಗಲಿದೆ ಎಂದು ಹೇಳಲಾಗಿದೆ. ಆಗಸ್ಟ್ ನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಚಿತ್ರದ ಸಿದ್ಧತೆ ಗಳು ಭರದಿಂದ ಸಾಗಿವೆ.
ತಲೈವರ್ 169 ಸೂಪರ್ಸ್ಟಾರ್ ರಜನಿಕಾಂತ್ ಮತ್ತು ನೆಲ್ಸನ್ ದಿಲೀಪ್ಕುಮಾರ್ ಕಾಂಬಿನೇಷನ್ನಲ್ಲಿ ಬರುತ್ತಿರುವ ಮೊದಲ ಸಿನಿಮಾ. ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರು ಚಿತ್ರಕ್ಕೆ ಸಂಗೀತ ಸಂಯೋಜಿಸಲು ನಿರ್ಧರಿಸಿದ್ದಾರೆ. ವರದಿಗಳ ಪ್ರಕಾರ, ತಲೈವರ್ 169 ಅನ್ನು 2023 ರ ಬೇಸಿಗೆಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆಯಂತೆ.