ಕೊರೊನ ಎರಡನೇ ಅಲೆ ಯಾವಾಗ ಕಡಿಮೆ ಆಗುವುದು ಎಂದು ಮಾಹಿತಿ ಕೊಟ್ರು ಕರ್ನಾಟಕದ ಖ್ಯಾತ ವೈದ್ಯರು

Updated: Monday, May 3, 2021, 15:20 [IST]

ಕೊರೊನಾ ಎರಡನೇ ಅಲೆ ಎಲ್ಲರನ್ನು ಮಹಾಮಾರಿಯಂತೆ ಕಾಡುತ್ತಿದ್ದು, ಭಾರತದಲ್ಲಿ ವೈರಸ್ ಗೆ ಜನ ತತ್ತರಿಸಿ ಹೋಗಿದ್ದಾರೆ. ಕಳೆದ ವರ್ಷ ಕೊರೊನಾ ಹರಡುವಿಕೆ ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಕಡಿಮೆಯಾಗಿತ್ತು. ಅದರಂತೆಯೇ ಈ ವರ್ಷ ಎರಡನೇ ಅಲೆಯೂ ಜೂನ್ ವೇಳೆಗೆ ತಗ್ಗಲಿದೆ. ಆದರೆ ಮತ್ತೆ ಉಲ್ಬಣಗೊಳ್ಳುತ್ತೆ ಎಚ್ಚರವಾಗಿರಿ ಎಂದು ಜಯದೇವ ಹೃದ್ರೋಗ ಆಸ್ಪತ್ರೆ ಮುಖ್ಯಸ್ಥ ಡಾ. ಸಿ.ಎನ್.ಮಂಜುನಾಥ್ ಹೇಳಿದ್ದಾರೆ.  

ಸೋಂಕು, ಜೂನ್ ನಂತರ ಕಡಿಮೆಯದರೂ ಡಿಸೆಂಬರ್ ತನಕ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಬೇಕು. ಕೆಲವು ದೇಶಗಳಲ್ಲಿ ಸೋಂಕು ಕಡಿಮೆಯಾಗಿ ನಾಲ್ಕು ತಿಂಗಳ ನಂತರ ಮತ್ತೆ ಉಲ್ಬಣಗೊಂಡ ಉದಾಹರಣೆ ಇದೆ. ಅಮೆರಿಕ, ಬ್ರೆಜಿಲ್ ದೇಶವನ್ನು ಹಿಂದಿಕ್ಕಿ ಸೋಂಕಿತರ ಸಂಖ್ಯೆಯಲ್ಲಿ ಭಾರತ ದೇಶ ಮುಂದಿದೆ. ವೈದ್ಯರೇ ರೋಗಿಗಳಾಗುತ್ತಿದ್ದು, ಸೆಕ್ಯೂರಿಟಿಗಳೇ ನಮ್ಮ ಟೆಂಪರೇಚರ್ ಟೆಸ್ಟ್ ಮಾಡುವ ಪರಿಸ್ಥಿತಿಗೆ ಬದಲಾಗಿದೆ.

ಕೋವಿಡ್ ಮೊದಲ ಅಲೆಗೂ ಹಾಗೂ 2ನೇ ಅಲೆಗೂ ಬಹಳಷ್ಟು ವ್ಯತ್ಯಾಸವಿದೆ. 2ನೇ ಅಲೆಯಲ್ಲಿ ಹರಡುವಿಕೆ ಪ್ರಮಾಣ ನಾಲ್ಕು ಪಟ್ಟು ಹೆಚ್ಚಾಗಿದೆ. ಇಷ್ಟು ಮಾತ್ರವಲ್ಲದೇ ಕಾಯಿಲೆ ತೀವ್ರತೆ ಕೂಡ ಜಾಸ್ತಿ ಇದೆ. ಹೀಗಾಗಿ ಮುನ್ನೆಚ್ಚರಿಕೆ ಅತ್ಯಗತ್ಯವಿದೆ. ಬಟ್ಟೆ ಮಾಸ್ಕ್ ಬದಲಿಗೆ ಎನ್95 ಮಾಸ್ಕ್ ಬಳಸುವುದು ಉತ್ತಮ. ಮಾಸ್ಕ್ ಹಾಕಿಕೊಳ್ಳುವುದರಿಂದ ಯಾವುದೇ ಆಕ್ಸಿಜನ್ ಲೆವಲ್ ಕಡಿಮೆಯಾಗುವುದಿಲ್ಲ. ಬಟ್ಟೆ ಮಾಸ್ಕ್ ಬಳಸಿದರೂ ಪ್ರತಿ ದಿನ ರಾತ್ರಿ ಸ್ವಚ್ಛಗೊಳಿಸಿ, ಐರನ್ ಮಾಡಿ ಹಾಕಿಕೊಳ್ಳಿ ಆಗ ಸೋಂಕು ಬಿಸಿಗೆ ಸಾಯಬಹುದು ಎಂದು ಹೇಳಿದರು.

ಇನ್ನು ಲಸಿಕೆ ಬಗ್ಗೆ ಮಾತನಾಡಿದ ಅವರು, ಲಸಿಕೆ ನಂತರ ಕೊರೊನಾ ಬಂದರೆ ಎರಡು ಮೂರು ವಾರಗಳ ಕಾಲ ಲಸಿಕೆ ತೆಗೆದುಕೊಳ್ಳಬಾರದು. ಲಸಿಕೆ ತೆಗೆದುಕೊಂಡ ಮೇಲೂ ಕೊರೊನಾ ಬರಬಹುದು. ಲಸಿಕೆ ಹಾಕಿಸಿಕೊಂಡಾಗ ಗುಂಪು ಸೇರುವುದು, ನಿರ್ಲಕ್ಷ್ಯ ವಹಿಸಬಾರದು. ಮೊದಲ ಡೋಸ್ ನಂತರ ಸೋಂಕು ಬಂದರೆ ಎರಡು ಮೂರು ವಾರ ಕಳೆದ ನಂತರ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.