ಕೊರೊನಾ ಪಾಸಿಟಿವ್‌ ಬಂದವರೆಲ್ಲರೂ ಆಸ್ಪತ್ರೆಗೆ ಹೋಗುವುದು ಅನಿವಾರ್ಯನಾ..?

Updated: Wednesday, May 5, 2021, 22:35 [IST]

ದಿನ ದಿನಕ್ಕೂ ಕೊರೊನಾ ವೈರಸ್ನಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಒಂದ್ಕಡೆ ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆಯಿದ್ದರೆ, ಇನ್ನೊಂದ್ಕಡೆ ಆಕ್ಸಿಜನ್ಗಾಗಿ ಹಾಹಾಕಾರ ಉಂಟಾಗಿದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಹಲವು ಮಂದಿ ಕೊನೆಯುಸಿರೆಳೆಯುತ್ತಿದ್ದಾರೆ. ಕರ್ನಾಟಕದಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ವಿಪರೀತವಾಗಿದೆ. ಹೀಗಿರುವಾಗ ಸೋಂಕಿತರಿಗೆ ಯಾವ ಹಂತದಲ್ಲಿ ಆಸ್ಪತ್ರೆ ಸೇರಬೇಕು? ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರಿಗೆ, ಅವರು ಆಸ್ಪತ್ರೆಗೆ ದಾಖಲಾಗಬೇಕೋ? ಬೇಡವೋ? ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.. 

ಕೊರೊನಾ ವೈರಸ್ ಸೋಂಕಿತರು, ಮೊದಲು ಮಾಡಬೇಕಾಗಿರುವುದು ಪಲ್ಸ್ ಆಕ್ಸಿಮೀಟರ್ ಖರೀದಿಸುವುದು. ಇದು ಮೆಡಿಕಲ್ ಶಾಪ್ ಗಳಲ್ಲಿ ಸಿಗುತ್ತದೆ. ಸುಮಾರು ಒಂದೂವರೆ - ಎರಡು ಸಾವಿರದ ಆಸುಪಾಸಿನಲ್ಲಿ ಬೆಲೆ ಇರುತ್ತದೆ. ಈ ಬಟ್ಟೆ ಒಣಗಿಸುವ ಕ್ಲಿಪ್ ಮಾದರಿಯ ಪುಟ್ಟ ಉಪಕರಣದ ನಿಗದಿತ ಜಾಗದಲ್ಲಿ ಬಲಗೈನ ಮಧ್ಯದ ಬೆರಳಿಟ್ಟರೆ ಅದರ ಸ್ಕ್ರೀನ್ ಮೇಲೆ ನಮ್ಮ ರಕ್ತದ ಹರಿವಿನ ಮೂಲಕ ಶ್ವಾಸಕೋಶವು ನಮ್ಮ ಅಂಗಾಂಗಗಳಿಗೆ ಪೂರೈಸುತ್ತಿರುವ ಆಮ್ಲಜನಕದ ಪ್ರಮಾಣವನ್ನು ಸಂಖ್ಯೆಗಳ ಮೂಲಕ ತೋರಿಸುತ್ತದೆ. ನಿಮಗಿರುವ ಇನ್ನಿತರ ರೋಗ ಲಕ್ಷಣಗಳು ಸೌಮ್ಯ ಅಥವಾ ಸಾಧಾರಣವಾಗಿದ್ದು, ಈ ಸಂಖ್ಯೆ 94 ಮತ್ತು ಅದಕ್ಕೂ ಹೆಚ್ಚಾಗಿದ್ದರೆ ನೀವು ನಿಶ್ಚಿಂತೆಯಿಂದ ಮನೆಯಲ್ಲೇ ಪ್ರತ್ಯೇಕವಾಗಿದ್ದು, ನಿಮಗಿರುವ ಲಕ್ಷಣಗಳಿಗೆ ಅನುಗುಣವಾಗಿ ವೈದ್ಯರ ಸಲಹೆ ಮೇರೆಗೆ ಬಹುತೇಕ ಕಾಮನ್ ಆಗಿ ಸಿಗುವ ಔಷಧಿಗಳನ್ನು ಸೇವಿಸುತ್ತಾ ಗುಣಮುಖರಾಗಬಹುದು.

ಆದರೆ ಆ ರೀಡಿಂಗ್ 94 ರಿಂದ ಒಂದೊಂದು ಸಂಖ್ಯೆ ಕಡಿಮೆ ಆದಂತೆ ನೀವು ಆ ಮಟ್ಟದಲ್ಲಿ ಅಪಾಯ ವಲಯವನ್ನು ಪ್ರವೇಶಿಸುತ್ತಿರುವಿರಿ ಎಂದರ್ಥ. ಈ ಹಂತದಲ್ಲಿ ಕೃತಕ ಆಕ್ಸಿಜನ್ ಪೂರೈಕೆ ಅವಶ್ಯಕತೆ ಇದ್ದು ಅವರು ಆಸ್ಪತ್ರೆ ಸೇರಲೇಬೇಕಾಗುತ್ತದೆ. ರೀಡಿಂಗ್ 90ಕ್ಕೂ ಕಡಿಮೆ ಆದರಂತೂ ನಿಮ್ಮ ಶ್ವಾಸಕೋಶ ಸೋಂಕಿನಿಂದಾಗೀ ಸರಿಯಾಗಿ ಕಾರ್ಯ ನಿರ್ವಹಿಸಲು ವಿಫಲವಾಗುತ್ತಿದ್ದು, ಅಂತವರಿಗೆ ಪ್ರಾಣಾಪಾಯವಿದೆ ಎಂಬುದರ ಸೂಚನೆ ಅದು. 
ಇನ್ನು ನಿಮಗೆ ತೀರಾ ಸುಸ್ತು, ನಿಮಗೆ ಪಾಸಿಟಿವ್ ಬಂದು 5ದಿನಗಳವರೆಗೆ ಜ್ವರ ಕಡಿಮೆಯಾಗದಿದ್ದರೆ, ಎದೆ ನೋವು ಕಾಣಿಕೊಂಡರೆ ನೀವು ಆಸ್ಪತ್ರೆಗೆ ದಾಖಲಾಗಲೇಬೇಕು. ಇಲ್ಲದಿದ್ದರೆ ಮನೆಯಲ್ಲೇ ಅರಾಮವಾಗಿ ಹುಷಾರಾಗಬಹುದು.