ಪಿತೃಪಕ್ಷ:: ಇದರ ಮಹತ್ವವೇನು ನಿಮಗೆ ಗೊತ್ತೇ! ಹಾಗಾದ್ರೆ ಇದರ ಬಗ್ಗೆ ತಿಳಿದುಕೊಳ್ಳೋಣ?

By Infoflick Correspondent

Updated:Monday, September 12, 2022, 21:20[IST]

ಪಿತೃಪಕ್ಷ:: ಇದರ ಮಹತ್ವವೇನು ನಿಮಗೆ ಗೊತ್ತೇ! ಹಾಗಾದ್ರೆ ಇದರ ಬಗ್ಗೆ ತಿಳಿದುಕೊಳ್ಳೋಣ?

ಹಿಂದೂ ಧರ್ಮದಲ್ಲಿ ಹಿರಿಯರು ಹಾಗೂ ಪೂಜ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವ, ನಮ್ಮ ಪ್ರೀತಿಪಾತ್ರರು ನಮ್ಮನ್ನು ತೊರೆದಾಗ ಅವರ ಆತ್ಮಕ್ಕೆ ಪ್ರಾರ್ಥನೆ ಸಲ್ಲಿಸಲು ವಿಶೇಷ ಸಮಯ ಪಿತೃ ಪಕ್ಷ. ಹದಿನಾರು ದಿನಗಳ ಈ ಪಿತೃ ಪಕ್ಷದ ಅವಧಿಯಲ್ಲಿ ಮೃತರ ಆತ್ಮಕ್ಕೆ ನೆಮ್ಮದಿ ಸಿಗಲಿ, ಅವರ ಪುನರ್ಜನ್ಮ ಮತ್ತು ಶಾಶ್ವತವಾಗಿ ಈ ವಿಶ್ವದಿಂದ ಮುಕ್ತ ಹರಿವಿಗೆ ತರ್ಪಣವನ್ನು ನೀಡುವುದು ಪದ್ಧತಿ.

2022ನೇ ಸಾಲಿನಲ್ಲಿ ಸೆಪ್ಟೆಂಬರ್‌ 10ರಿಂದ ಸೆಪ್ಟೆಂಬರ್‌ 25ರವರೆಗೆ ಪಿತೃಪಕ್ಷ ಇರುತ್ತದೆ. ಈ ಸಮಯದಲ್ಲಿ ತಪ್ಪದೇ ನಮ್ಮ ಹಿರಿಯರಿಗೆ ಪೂಜೆ ಸಲ್ಲಿಸುವುದು ಕಡ್ಡಾಯ. ಮಹಾಲಯ ಅಮಾವಾಸ್ಯೆಯ ಮಹತ್ವ ಮಹಾಲಯ ಅಮವಾಸ್ಯೆಯು ಪಿತೃ ಪಕ್ಷದ ಅಂತ್ಯ ಎನ್ನಲಾಗುತ್ತದೆ.

ಮಹಾಲಯ ಅಮಾವಾಸ್ಯೆ:

ಮಹಾಲಯ ಅಂದರೆ - 'ಮಹಾ' - ದೊಡ್ಡ 'ಲಯ' - ನಾಶ - ಸಮುದ್ರ ಮಂಥನ ಸಂದರ್ಭದಲ್ಲಿ ಬಹಳ ಋಷಿಗಳು ಮತ್ತು ದೇವತೆಗಳು ದೈತ್ಯರಿಂದ ಸಂಹರಿಸಲ್ಪಟ್ಟರು. ಈ ಋಷಿಗಳು ನಮ್ಮ ಪೂರ್ವಜರಾಗಿದ್ದುದರಿಂದ ಅವರ ನೆನಪಿನಲ್ಲಿ ಮಹಾಲಯ ಪಕ್ಷವವನ್ನು ಆಚರಿಸುತ್ತೇವೆ. ಅದುವೇ ಸರ್ವಪಿತೃ ಅಮಾವಾಸ್ಯೆ. ಮಹಾಲಯ ಅಮಾವಾಸ್ಯೆ ಎಂದು ಕರೆಯಲ್ಪಡುವ ಅಮವಾಸ್ಯೆಯು ಅಗಲಿದ ಆತ್ಮಗಳಿಗೆ ಸಮರ್ಪಿತವಾಗಿದೆ. ನೀವು ಈ ದೇಹವನ್ನು ತೊರೆದಾಗ ಪುರೂರವ, ವಿಶ್ವದೇವ ಎಂಬ ದೇವತೆಗಳಿಂದ ಇನ್ನೊಂದು ಜಗತ್ತಿಗೆ ಮಾರ್ಗದರ್ಶನ ಪಡೆಯುತ್ತೀರಿ. ಅವರು ಬಂದು ನಿಮ್ಮನ್ನು ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಮಾರ್ಗದರ್ಶನ ಮಾಡುತ್ತಾರೆ. ಮಹಾಲಯ ಅಮಾವಾಸ್ಯೆಯು ನೀವು ಅಗಲಿದ ಎಲ್ಲ ಆತ್ಮಗಳನ್ನು ನೆನಪಿಸಿಕೊಂಡು ಅವರಿಗೆ ಧನ್ಯವಾದಗಳನ್ನು ಅರ್ಪಿಸುವ ಮತ್ತು ಅವರಿಗೆ ಶಾಂತಿಯನ್ನು ಬಯಸುವ ದಿನವಾಗಿದೆ.

ಪಿತೃ ಪಕ್ಷ ಎಂದರೇನು?

ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆಯ ತನಕ 15 ದಿನಗಳ ಈ ಕಾಲವನ್ನು 'ಪಿತೃ ಪಕ್ಷ' 'ಪಕ್ಷಮಾಸ' ಎನ್ನುತ್ತಾರೆ. ಯಾರು ಈ ಅವಧಿಯಲ್ಲಿ ಶ್ರಾದ್ಧವನ್ನು ಮಾಡುತ್ತಾರೋ ಅವರಿಗೆ ಪಿತೃಗಳು ಜ್ಞಾನ, ಭಕ್ತಿ, ಸಂಪತ್ತು ಮೊದಲಾದ ಆಶೀರ್ವಾದ ಮಾಡುತ್ತಾರೆ, ಮಾಡದವರಿಗೆ ಶಾಪವನ್ನು ನೀಡುತ್ತಾರೆ, ಪಿತೃಗಳ ಶಾಪದಿಂದ ವಂಶಾಭಿವೃದ್ಧಿ ಆಗುವುದಿಲ್ಲ ಎಂಬ ನಂಬಿಕೆ ಇದೆ.

ಪಿತೃಪಕ್ಷದ ಹಿನ್ನೆಲೆ:

ಮಹಾಭಾರತ ಪುರಾಣದ ಪ್ರಕಾರ ಕರ್ಣ ಯುದ್ಧದಲ್ಲಿ ಹತನಾಗಿ ಸ್ವರ್ಗ ಸೇರಿದಾಗ ಅವನಿಗೆ ಬಂಗಾರ ಮತ್ತು ಆಭರಣಗಳನ್ನು ಆಹಾರವಾಗಿ ನೀಡಲಾಯಿತು. ಆದರೆ ಕರ್ಣನಿಗೆ ಬೇಕಾಗಿದ್ದು ನಿಜವಾದ ಆಹಾರ. ಇದರಿಂದ ಬೇಸತ್ತ ಕರ್ಣ ಇಂದ್ರನಲ್ಲಿ ಕೇಳುತ್ತಾನೆ, ಆಗ ಇಂದ್ರ ಹೇಳುತ್ತಾನೆ 'ನೀನು ನಿನ್ನ ಪೂರ್ವಿಕರಿಗೆ ಅವರ ಶ್ರಾದ್ಧದಲ್ಲಿ ಅನ್ನವನ್ನು ದಾನವಾಗಿ ನೀಡಿಲ್ಲ. ಜೀವಮಾನ ಪೂರ್ತಿ ಬೇಕಾದಷ್ಟು ಬಂಗಾರಾದಿ ಆಭರಣಗಳನ್ನು ದಾನವಾಗಿ ನೀಡಿದ್ದೇ. ಅದಕ್ಕಾಗಿ ನಿನಗೆ ನಿಜವಾದ ಆಹಾರ ದೊರಕುತ್ತಿಲ್ಲ'.

ತನಗೆ ತನ್ನ ಪೂರ್ವಜರ ಬಗ್ಗೆ ಏನೂ ಗೊತ್ತಿಲ್ಲದಿದ್ದರಿಂದ ಯಾವ ಶ್ರಾದ್ಧವನ್ನು ಮಾಡಲಾಗಿಲ್ಲ ಎಂದು ಕರ್ಣ ಹೇಳುತ್ತಾನೆ. ಇದಕ್ಕಾಗಿ ಅವನಿಗೆ ವಿಶೇಷವಾಗಿ ಪರಿಹಾರ ರೂಪವಾಗಿ 15 ದಿನಗಳ ಕಾಲ ಭೂಲೋಕಕ್ಕೆ ಹೋಗಿ ಶ್ರಾದ್ಧ ಮಾಡಿ ಅವರ ನೆನಪಿನಲ್ಲಿ ಆಹಾರವನ್ನು ದಾನ ಮಾಡಲು ಅನುಮತಿ ನೀಡುತ್ತಾರೆ. ಆ ಕಾಲಕ್ಕೆ ಪಕ್ಷಮಾಸವೆನ್ನುತ್ತಾರೆ ಎಂಬುದು ಒಂದು ಪೌರಾಣಿಕ ಹಿನ್ನೆಲೆ.