ಲಾಕ್ ಡೌನ್ ಸುಳಿವು ನೀಡಿದ ಸಿಎಂ: ಜನರ ಸಹಾಕಾರ ಮುಖ್ಯ ಎಂದು ಮನವಿ

Updated: Friday, May 7, 2021, 12:43 [IST]

ರಾಜ್ಯದಲ್ಲಿ ಮರಣಮೃದಂಗ ಬಾರಿಸುತ್ತೊರುವ ಕೊರೋನಾ ಸೋಂಕನ್ನು ಮುಂದಿನ ದಿನಗಳಲ್ಲಿ ನಿಯಂತ್ರಿಸಲು ಲಾಕ್ ಡೌನ್ ಅನಿವಾರ್ಯವಾಗಬಹುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಈ ಮೂಲಕ ಇನ್ನೆರಡು ದಿನಗಳಲ್ಲಿ ಕರ್ನಾಟಕದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡುವ ಬಗ್ಗೆ ಸುಳಿವನ್ನು ನೀಡಿದ್ದಾರೆ.

ಸರ್ಕಾರ ಈಗಾಗಲೇ ರಾಜ್ಯದಲ್ಲಿ 14 ದಿನ ಹೇರಿಕೆ ಮಾಡಿದೆ. ಆದರೆ, ಈ ಜನತಾ ಕರ್ಫ್ಯೂನಿಂದ ಏನೂ ಪ್ರಯೋಜನವಾಗುತ್ತಿಲ್ಲ, ಕೊರೋನಾ ನಿಯಂತ್ರಣಕ್ಕೆ ಬಂದಿಲ್ಲ. ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ, ಜನರು ಜನತಾ ಕರ್ಫ್ಯೂಗೆ ಸಾಕಷ್ಟು ಸಹಕಾರ ನೀಡುತ್ತಿಲ್ಲ, ಹೀಗಾಗಿ ಇನ್ನಷ್ಟು ಕಠಿಣ ನಿರ್ಬಂಧ ಕ್ರಮಗಳು ಅನಿವಾರ್ಯವಾಗಿದೆ ಎಂದರು. 

ಲಾಕ್ ಡೌನ್ ಹೇರಿಕೆ ಮಾಡುವ ಕುರಿತು ಅಧಿಕಾರಿಗಳು, ತಜ್ಞರ ಜೊತೆ ಇಂದು-ನಾಳೆ ಕುಳಿತು ಚರ್ಚಿಸಿ ಸಮಾಲೋಚನೆ ಮಾಡಿ ಇನ್ನೆರಡು ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬೆಂಗಳೂರಿನ ಅಣ್ಣಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡುತ್ತಾ ಹೇಳಿದರು. ಈ ಕೊರೋನಾ ಮಹಾಮಾರಿಯಿಂದ ಆದಷ್ಟು ಬೇಗನೆ ಮುಕ್ತವಾಗಿ ದೇಶದ ಜನರು ನೆಮ್ಮದಿಯಿಂದ ಬದುಕುವ ಕಾಲ ಮತ್ತೆ ಬರಲಿ ಎಂದು ದೇವಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳಿದರು.
ದಿನೇ ದಿನೇ ಕೊರೊನಾ ಸೋಂಕಿತರು ಹಾಗೂ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಸರ್ಕಾರ ಮೀನಮೇಷ ಎಣಿಸದೆ ತಕ್ಷಣವೇ ಲಾಕ್ ಡೌನ್ ಘೋಷಣೆ ಮಾಡಿ ಜನರ ಸಾವು-ನೋವಿನ ಸಂಖ್ಯೆಯನ್ನು ಕಡಿಮೆ ಮಾಡಲಿ ಎಂಬ ಒತ್ತಡ ಕೇಳಿ ಬರುತ್ತಿದೆ.ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.