ಬೆಂಗಳೂರಿನಲ್ಲಿ ಬೆಡ್ ಪ್ರಾಬ್ಲಂ ಹಿಂದಿದೆ ಮಹಾ ದೋಖಾ..!

Updated: Tuesday, May 4, 2021, 17:34 [IST]

ನಿಮಗೆ ಕೋವಿಡ್ ಪಾಸಿಟಿವ್ ಇದ್ದು ಹೋಂ ಐಸೋಲೇಷನ್ ನಲ್ಲಿದ್ದೀರಾ..? ಹಾಗಾದರೆ ನಿಮ್ಮ ಹೆಸರಲ್ಲಿ ಈಗಾಗಲೇ ಕಮ್ಮಿ ಅಂದ್ರೂ 12 ಬೆಡ್ ಬುಕ್ಕಾಗಿವೆ, ಆದರೆ ಅದು ನಿಮಗಲ್ಲ. ನಿಮಗೆ ಬೆಡ್ ಬೇಕಾದರೆ, ಕಾದು ಕಾದು ಸತ್ತು, ಖಾಸಗಿ ಆಸ್ಪತ್ರೆಯಲ್ಲಿ ಲಕ್ಷ ಲಕ್ಷ ಹಣ ಕೊಟ್ಟೆ ಬೆಡ್ ಪಡೆಯಬೇಕು.   

ಹೌದು..  ಹೋಂ ಐಸೋಲೇಟ್ ಆಗುವ ವ್ಯಕ್ತಿಗಳಿಗೆ ತಿಳಿಯದಂತೆ ಅವರ ಹೆಸರಿನಲ್ಲಿ ಬೆಡ್ ಮೀಸಲಿಟ್ಟಿರುವ ಬಹು ದೊಡ್ಡ ದಂಧೆ ಬಯಲಾಗಿದೆ. ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಬಿಬಿಎಂಪಿಯ ಕಳ್ಳಾಟವನ್ನ ಬಯಲು ಮಾಡಿದ್ದಾರೆ. ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಬಿಬಿಎಂಪಿಯ ವಾರ್ ರೂಂ ಅಧಿಕಾರಿಗಳೇ ಕೃತಕ ಬೆಡ್ ಅಭಾವ ಸೃಷ್ಟಿಸಿರೋ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.

ಜನರು ತಮಗೆ ಕೊರೊನಾ ಸೋಂಕು ತಗಲುತ್ತಿದ್ದಂತೆ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ ಬೆಡ್ ಕೇಳುತ್ತಾರೆ. ಈ ವೇಳೆ ಅಧಿಕಾರಿಗಳು ಎ ಸಿಂಥೆಮೆಟಿಕ್ ಆಗಿದ್ದರೆ, ಮನೆಯಲ್ಲಿಯೇ ಐಸೋಲೇಟ್ ಆಗುವಂತೆ ತಿಳಿಸುತ್ತಾರೆ. ಅವರಿಂದ ಹೆಸರು, ಬಿಯು ನಂಬರ್ ಪಡೆದು ಆಸ್ಪತ್ರೆಯಲ್ಲಿ ಬೆಡ್ ಬ್ಲಾಕ್ ಮಾಡುತ್ತಾರೆ. ಇದೇ ರೀತಿ ಸುಮಾರು 4 ಸಾವಿರಕ್ಕೂ ಅಧಿಕ ಬೆಡ್ ಗಳನ್ನು ಅಧಿಕಾರಿಗಳೇ ಬ್ಲಾಕ್ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 

ಈ ಬಗ್ಗೆ ಸ್ವತಃ ತೇಜಸ್ವಿ ಸೂರ್ಯ ಅವರು, ಸೋಂಕಿತರ ಜೊತೆ ಮಾತನಾಡಿ ಬೆಡ್ ಸಿಕ್ಕಿದೆಯಾ ಅಥವಾ ಇಲ್ಲವಾ ಅನ್ನೋದನ್ನ ಖಚಿತಪಡಿಸಿಕೊಂಡಿದ್ದಾರೆ. ಸೋಂಕಿತರ ಕುಟುಂಬಸ್ಥರ ಜೊತೆ ತೇಜಸ್ವಿ ಸೂರ್ಯ ಮಾತನಾಡಿರುವ ಆಡಿಯೋಗಳು ಇದೀಗ ವೈರಲ್ ಆಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಕೃತಕ ಬೆಡ್ ಅಭಾವದಿಂದಲೇ ಸಮಸ್ಯೆ ಉಂಟಾಗಿದೆ ಎಂಬುದು ಸ್ಪಷ್ಟವಾಗಿದೆ.
ಹಾಗಾದ್ರೆ ಬುಕ್ ಮಾಡೋ ದಂಧೆಯಲ್ಲಿ ಕೇವಲ ಅಧಿಕಾರಿಗಳೇ ಭಾಗಿಯಾಗಿದ್ರಾ? ಇದರಲ್ಲಿ ಜನಪ್ರತಿನಿಧಿಗಳು ಶಾಮೀಲಾಗಿದ್ದಾರಾ ಅನ್ನೋದು ತನಿಖೆಯಲ್ಲಿ ತಿಳಿದು ಬರಬೇಕಿದೆ.