ಕರ್ನಾಟಕದಲ್ಲಿನ ಮಳೆ ಮತ್ತು ಪ್ರವಾಹದ ಬಗ್ಗೆ ಹವಾಮಾನ ಇಲಾಖೆಯಿಂದ ಈ ಎಚ್ಚರಿಕೆ!

By Infoflick Correspondent

Updated:Thursday, May 19, 2022, 08:05[IST]

ಕರ್ನಾಟಕದಲ್ಲಿನ ಮಳೆ ಮತ್ತು ಪ್ರವಾಹದ ಬಗ್ಗೆ ಹವಾಮಾನ ಇಲಾಖೆಯಿಂದ ಈ ಎಚ್ಚರಿಕೆ!

ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮೇ 18 ಮತ್ತು 19ರಂದು ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇರುವುದರಿಂದ 16 ಜಿಲ್ಲೆಗಳಲ್ಲಿ 'ಆರೆಂಜ್ ಅಲರ್ಟ್‌' ಮುಂದುವರಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಕರಾವಳಿಯಲ್ಲಿ ಬುಧವಾರ ಮತ್ತು ಶುಕ್ರವಾರ, ದಕ್ಷಿಣ ಒಳನಾಡಿನಲ್ಲಿ ಶುಕ್ರವಾರದವರೆಗೆ ಭಾರಿ ಮಳೆಯ ಆರೆಂಜ್‌ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡಿನ ಜಿಲ್ಲೆಗಳಿಗೆ ಮೇ 21ರವರೆಗೂ ಹೆಚ್ಚು ಮಳೆಯ ಆರೆಂಜ್‌ ಅಲರ್ಚ್‌ ನೀಡಲಾಗಿದೆ.  

ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಇರಲಿದೆ. ಕರಾವಳಿಯಲ್ಲಿ ಗಂಟೆಗೆ ಗರಿಷ್ಠ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಇಲಾಖೆ ಎಚ್ಚರಿಸಿದೆ. 

ಗುರುವಾರ ಕರಾವಳಿ ಜಿಲ್ಲೆಗಳಲ್ಲಿ ಅತಿ ಭಾರಿ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ. ಶುಕ್ರವಾರ ಮತ್ತು ಶನಿವಾರವೂ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ.  

ಕರಾವಳಿ ಭಾಗದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ 18ರಂದು ಆರೆಂಜ್ ಅಲರ್ಟ್‌ ಹಾಗೂ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್‌ ಘೋಷಿಸಲಾಗಿದೆ. 

ಅರಬ್ಬಿ ಸಮುದ್ರದಲ್ಲಿ ತೇವಾಂಶ ಭರಿತ ಗಾಳಿ ಪಶ್ಚಿಮ ದಿಕ್ಕಿನಿಂದ ಪ್ರತಿ ಗಂಟೆಗೆ 40ರಿಂದ 60 ಕಿಮೀ ವೇಗದಲ್ಲಿ ಕರ್ನಾಟಕ ಮತ್ತು ಕೇರಳ ತೀರಕ್ಕೆ ಬೀಸುತ್ತಿರುವುದು ಮತ್ತು ಲಕ್ಷದ್ವೀಪ ಪ್ರದೇಶದಲ್ಲಿನ ಮೇಲ್ಮೈ ಸುಳಿಗಾಳಿ ಮತ್ತು ತಮಿಳುನಾಡಿನ ಕರಾವಳಿ ಭಾಗದಲ್ಲಿನ ಮೇಲ್ಮೈ ಸುಳಿಗಾಳಿ ಮತ್ತು ಮಧ್ಯಪ್ರದೇಶದಿಂದ ಕರ್ನಾಟಕದ ಒಳನಾಡಿನ ಮೂಲಕ ತಮಿಳುನಾಡಿನವರೆಗೆ ಹಬ್ಬಿರುವ ಟ್ರಫ್‌ಗಳ ಕಾರಣದಿಂದ ಮುಂಗಾರು ಪೂರ್ವ ಮಳೆ ಬಿರುಸು ಪಡೆದುಕೊಂಡಿದೆ.