ಅಕ್ಷಯ ತೃತೀಯದಂದು ಚಿನ್ನ ಖರೀದಿಸುತ್ತಿರಾ ? ಇಲ್ಲಿದೆ ಡಿಜಿಟಲ್ ಚಿನ್ನದ ಬಗ್ಗೆ ಮುಖ್ಯ ಮಾಹಿತಿ
Updated:Sunday, May 1, 2022, 19:26[IST]

ಚೀನಾ ಬಳಿಕ, ಭಾರತ ವಿಶ್ವದಲ್ಲೇ ಅತಿ ಹೆಚ್ಚು ಚಿನ್ನ ಖರೀದಿಸುತ್ತದೆ. ಚಿನ್ನದ ಆಕರ್ಷಣೆಗೆ ಬಹುದೊಡ್ಡ ಕಾರಣವೆಂದರೆ ಸುರಕ್ಷಿತ ಹೂಡಿಕೆ ಆಯ್ಕೆಯೆಂದು ಪರಿಗಣಿಸಲಾಗುತ್ತದೆ.
ಚಿನ್ನವನ್ನ ಕೊಳ್ಳಲು ಅಂಗಡಿಗೆ ಹೋಗಬೇಕೇಂದಿಲ್ಲ. ಅಥವಾ ಅದರ ಶುದ್ಧತೆಯ ಬಗ್ಗೆ ಪರಿಶೀಲಿಸುವ ಅಗತ್ಯವೂ ಇಲ್ಲ. ಹಾಗಾದರೇ ಈ ಡಿಜಿಟಲ್ ಚಿನ್ನ ಎಂದರೇನು? ಡಿಜಿಟಲ್ ಚಿನ್ನ ಅನ್ನೋದು ವಸ್ತು ರೂಪದಲ್ಲಿ ಚಿನ್ನವನ್ನು ಕೊಳ್ಳಬಲ್ಲ ಒಂದು ಆನ್ಲೈನ್ ಚಾನಲ್. ನಿಮ್ಮ ಹೆಸರಿನಲ್ಲಿ 24 ಚಿನ್ನವನ್ನು ಒಂದು ಲಾಕರ್ನಲ್ಲಿ ಇಡಲಾಗುತ್ತದೆ. ಯಾವ ಪ್ಲಾಟ್ ಪಾರ್ಮ್ನಿಂದ ಚಿನ್ನವನ್ನು ಕೊಳ್ಳಲಾಯಿತೋ ಅದೇ ಇದರ ನಿರ್ವಹಣೆಯನ್ನು ಮಾಡುತ್ತದೆ. ಅದರ ಬೆಲೆಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಸಂಪರ್ಕ ಕಲ್ಪಿಸಲಾಗಿದೆ. ನೀವು ಕೊಳ್ಳುವಾಗ ಅದನ್ನು ಪ್ರತ್ಯಕ್ಷವಾಗಿ ನೋಡಬಹುದು.
ಅಗತ್ಯ ಇದ್ದಾಗ ಭೌತಿಕ ಚಿನ್ನಕ್ಕೆ ಪರಿವರ್ತಿಸಲೂ ಅವಕಾಶ ಇರುತ್ತದೆ. ಗ್ರಾಹಕರು ಮಾರುಕಟ್ಟೆ ದರಕ್ಕೆ ಮಾರಾಟ ಮಾಡಬಹುದು. ಡಿಜಿಟಲ್ ಚಿನ್ನ ಖರೀದಿಗೆ ಗರಿಷ್ಠ ಮಿತಿ ಇರುವುದಿಲ್ಲ. ಆದರೆ ಒಂದು ದಿನಕ್ಕೆ ಗರಿಷ್ಠ 2 ಲಕ್ಷ ರೂ. ಮೌಲ್ಯದ ಡಿಜಿಟಲ್ ಚಿನ್ನ ಕೊಳ್ಳಬಹುದು. 100 ರೂ.ಗಳಿಂದಲೂ ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡಬಹುದು.
ಸಂಸ್ಥೆಗಳು ವಿತರಿಸುತ್ತವೆ. ಎಂಎಂಟಿಸಿ ಪಿಎಎಂಪಿ, ಆಗ್ಯುಮೆಂಟ್ ಗೋಲ್ಡ್ಟೆಕ್ ಮತ್ತು ಡಿಜಿಟಲ್ ಗೋಲ್ಡ್ ಇಂಡಿಯಾ (ಸೇಫ್ ಗೋಲ್ಡ್) ಸಂಸ್ಥೆಗಳು ಡಿಜಿಟಲ್ ಚಿನ್ನವನ್ನು ಮಾರಾಟ ಮಾಡುತ್ತವೆ. ಈ ಸಂಸ್ಥೆಗಳು ಪೇಟಿಎಂ, ಗೂಗಲ್ ಪೇ, ಅಮೆಜಾನ್ ಪೇ ಮತ್ತು ಫೋನ್ಪೇ ಜತೆಗೆ ಒಪ್ಪಂದ ಮಾಡಿಕೊಂಡಿವೆ. ತಾನಿಷ್ಕ್, ಸೆನ್ಕೊ, ಕಲ್ಯಾಣ್ ಜ್ಯುವೆಲರ್ಸ್ ಕೂಡ ಡಿಜಿಟಲ್ ಚಿನ್ನವನ್ನು ಮಾರಾಟ ಮಾಡುತ್ತವೆ. ಗ್ರಾಹಕರು ಡಿಜಿಟಲ್ ಗೋಲ್ಡ್ ಅಕೌಂಟ್ಗಳನ್ನು ತೆರೆಯಬಹುದು.
ಪೇಟಿಎಂ ಮನಿ, ಹೆಚ್ಡಿಎಫ್ಸಿ ಸೆಕ್ಯುರಿಟೀಸ್, ಮೋತಿಲಾಲ್ ಓಸ್ವಾಲ್ ಮುಂತಾದ ಬ್ರೋಕರೇಜ್ ವ್ಯವಹಾರಗಳ ಜೊತೆಗೆ ಗೂಗಲ್ ಪೇ ಹಾಗೂ ಫೋನ್ಪೇನಲ್ಲಿ ಡಿಜಿಟಲ್ ಚಿನ್ನವನ್ನು ಖರೀದಿ ಮಾಡಬಹುದು.
ಡಿಜಿಟಲ್ ಚಿನ್ನಕ್ಕೆ ಶೇ.3ರ ಜಿಎಸ್ಟಿ ಹೊರತುಪಡಿಸಿ ಉಳಿದಂತೆ ವೆಚ್ಚವಿರುವುದಿಲ್ಲ. ಸ್ಟೋರೇಜ್ ಮತ್ತು ಕಳವಾಗುವ ಭೀತಿ ಇರುವುದಿಲ್ಲ. ಇಟಿಎಫ್ ಮತ್ತು ಗೋಲ್ಡ್ ಫಂಡ್ಗಳಲ್ಲಾದರೆ ಶೇ. 0.5 - 1 ವಾರ್ಷಿಕ ಶುಲ್ಕ ಇರುತ್ತದೆ. ಜತೆಗೆ ಇಲ್ಲಿ ಡಿಮ್ಯಾಟ್ ಖಾತೆಯ ಅಗತ್ಯವೂ ಇಲ್ಲ. ಇಟಿಎಫ್ಗೆ ಆದರೆ ಡಿಮ್ಯಾಟ್ ಬೇಕಾಗುತ್ತದೆ.
ಗೂಗಲ್ ಪೇ ಮೂಲಕ ಚಿನ್ನ ಖರೀದಿ ಹೇಗೆ?
ಹಂತ 1: ನಿಮ್ಮ ಪಿನ್ ನಮೂದಿಸಿ ಗೂಗಲ್ ಪೇ ಅಥವಾ ಜಿಪೇ ಆಪ್ ತೆರೆಯಿರಿ
ಹಂತ 2: ಹುಡುಕಾಟ ವಿಭಾಗದಲ್ಲಿ (ಸರ್ಚ್) 'ಗೋಲ್ಡ್ ಲಾಕರ್' ಎಂದು ಬರೆಯಿರಿ
ಹಂತ 3: ಗೋಲ್ಡ್ ಲಾಕರ್ ಅನ್ನು ಕ್ಲಿಕ್ ಮಾಡಿ, Buy Gold ಮೇಲೆ ಕ್ಲಿಕ್ ಮಾಡಿ (ಇಲ್ಲಿ ನಿಮಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನದ ಖರೀದಿ ಬೆಲೆಯನ್ನು ತೆರಿಗೆ ಸಮೇತ ತೋರಿಸಲಾಗುತ್ತದೆ)
ಹಂತ 4: ನೀವು ಎಷ್ಟು ರೂಪಾಯಿಯ ಚಿನ್ನವನ್ನು ಖರೀದಿ ಮಾಡಲು ಬಯಸುತ್ತೀರಿ ಎಂದು ನಮೂದಿಸಿ
ಹಂತ 5: ನಿಮ್ಮ ಆದ್ಯತೆಯ ಪಾವತಿ ವಿಧಾನವನ್ನು ಆಯ್ಕೆಮಾಡಿ ಮತ್ತು ಪಾವತಿಯನ್ನು ಪೂರ್ಣಗೊಳಿಸಿ
ಗಮನಿಸಿ: ಬಳಕೆದಾರರು ಖರೀದಿಸಬೇಕಾದ ಕನಿಷ್ಠ ಚಿನ್ನದ ಮೊತ್ತವು 1 ಗ್ರಾಂ ಆಗಿದೆ.
ಗೂಗಲ್ ಪೇ ಮೂಲಕ ಮೂಲಕ ಚಿನ್ನವನ್ನು ಮಾರಾಟ ಮಾಡುವುದು ಹೇಗೆ?
ಹಂತ 1: ನಿಮ್ಮ ಪಿನ್ ನಮೂದಿಸಿ ಗೂಗಲ್ ಪೇ ಆಪ್ ತೆರೆಯಿರಿ
ಹಂತ 2: ಹುಡುಕಾಟ ವಿಭಾಗದಲ್ಲಿ (ಸರ್ಚ್) 'ಗೋಲ್ಡ್ ಲಾಕರ್' ಎಂದು ಬರೆಯಿರಿ
ಹಂತ 3: ಮಾರಾಟ ಆಯ್ಕೆಯನ್ನು ಆರಿಸಿ
ಹಂತ 4: ನೀವು ಮಾರಾಟ ಮಾಡಲು ಬಯಸುವ ಚಿನ್ನದ ತೂಕವನ್ನು ಮಿಲಿಗ್ರಾಂಗಳಲ್ಲಿ ನಮೂದಿಸಿ
ಹಂತ 5: ಒಮ್ಮೆ ಮಾರಾಟವನ್ನು ಅನುಮೋದಿಸಿದ ನಂತರ, ಹಣವು ನಿಮ್ಮ ಖಾತೆಗೆ ಬರಲಿದೆ