ಬ್ಯಾಂಕ್ ಸಾಲದಹೊರೆ ಹೊತ್ತ ಗ್ರಾಹಕರೇ ಇತ್ತ ಗಮನಿಸಿ.. ಮತ್ತೆ ಮೊರಾಟೋರಿಯಂ ಘೋಷಿಸಲಿದ್ಯಾ ಆರ್ ಬಿಐ..?

Updated: Wednesday, April 28, 2021, 12:56 [IST]

ಕೊರೊನಾ ಅಬ್ಬರ ಹೆಚ್ಚಾದ ಹಿನ್ನೆಲೆ ಆರ್ ಬಿಐ ಮತ್ತೆ ಮೊರಾಟೋರಿಯಂ ಘೋಷಿಸುವ ಸಾಧ್ಯತೆ ಇದೆ. ಹಾಗೇನಾದರೂ ಆದರೆ, ಗ್ರಾಹಕರಿಗೆ ಕೊಂಚ ನಿರಾಳವಾಗುವುದಂತೂ ಸತ್ಯ.

ಕೊರೋನಾ ವೈರಸ್ ಬಿಕ್ಕಟ್ಟು ಉದ್ಭವಿಸಿದ ಹಿನ್ನೆಲೆಯಲ್ಲಿ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿತ್ತು. ಆಗ ಮಾರ್ಚ್ 1ರಿಂದ ಮೇ 31ರವರೆಗೆ ಬ್ಯಾಂಕುಗಳ ಸಾಲದ ಕಂತು ಕಟ್ಟುವುದರಿಂದ ಗ್ರಾಹಕರಿಗೆ ವಿನಾಯಿತಿ ಘೋಷಿಸುವಂತೆ ಬ್ಯಾಂಕುಗಳಿಗೆ ಆರ್ಬಿಐ ಸೂಚಿಸಿತ್ತು. ನಂತರ ಈ ಮೊರಾಟೋರಿಯಂ ಅವಧಿಯನ್ನು ಆಗಸ್ಟ್ 31ರವರೆಗೂ ವಿಸ್ತರಿಸಿತ್ತು. ಈ ವೇಳೆ ಬಹಳಷ್ಟು ಗ್ರಾಹಕರು ಇದರ ಅವಕಾಶ ಪಡೆದು ಆರು ತಿಂಗಳು ಸಾಲದ ಕಂತು ಕಟ್ಟಿರಲಿಲ್ಲ.   

ಇದಾದ ಬಳಿಕ ಬ್ಯಾಂಕ್ ಗಳು ಸಾಲದ ಇಎಂಐನ ಅಸಲಿ ಹಣದ ಜೊತೆಗೆ ಬಡ್ಡಿ ಹಾಗೂ ಚಕ್ರ ಬಡ್ಡಿಯನ್ನು ಗ್ರಾಹಕರ ಮೇಲೆ ಹೇರಿದ್ದವು. ಈ ಬಗ್ಗೆ ಮೊರಾಟೋರಿಯಂ ಘೋಷಣೆ ಮಾಡಿದ ಆರು ತಿಂಗಳ ಅವಧಿಯಲ್ಲಿ ಸಾಲದ ಮೇಲಿನ ಬಡ್ಡಿಗೆ ಚಕ್ರಬಡ್ಡಿ ವಿಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡತ್ತು.  
ಕೊರೋನಾ ಕಾರಣದಿಂದಾಗಿ ಕಳೆದ ವರ್ಷ ಸಾಲದ ಕಂತು ಮರು ಪಾವತಿಸಲು ನೀಡಲಾಗಿದ್ದ ಆರು ತಿಂಗಳ ವಿನಾಯಿತಿಗಾಗಿ ಚಕ್ರಬಡ್ಡಿ ಇಲ್ಲವೇ ದಂಡ ವಸೂಲಿ ಮಾಡದಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು . ಈಗಾಗಲೇ ಚಕ್ರಬಡ್ಡಿ ಹಾಗೂ ವಿನಾಯಿತಿ ವಸೂಲಿ ಮಾಡಿದ್ದರೆ ಮರಳಿಸುವಂತೆಯೂ ನ್ಯಾಯಾಲಯ ತಿಳಿಸಿದೆ . 

ಅದರಂತೆಯೇ ಈ ಬಾರಿಯೂ ಆರ್ ಬಿಐ ಮೊರಾಟೋರಿಯಂ ಘೋಷಿಸುವ ಎಲ್ಲಾ ಸಾಧ್ಯತೆಯೂ ಇದೆ. ಹಾಗೇನಾದರೂ ಆದರೆ, ಗ್ರಾಹಕರಿಗೆ ಸ್ವಲ್ಪ ನಿರಾಳವಾಗುತ್ತದೆ. ಆದರೆ, ಬ್ಯಾಂಕ್ ಗಳಿಗೆ ಇದು ಹೊರೆಯಾಗಲಿದ್ದು, ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು..