ರಾಜ್ಯದಲ್ಲಿ ಮತ್ತೆ ಜಾರಿಯಾಯ್ತು ಲಾಕ್ಡೌನ್: ಮೇ 24 ರವರೆಗೆ ಕರ್ನಾಟಕ ಸಂಪೂರ್ಣ ಸ್ಥಬ್ಧ..

Updated: Friday, May 7, 2021, 19:44 [IST]

ಮೇ 10ರಿಂದ ಕರ್ನಾಟಕ ಕಂಪ್ಲೀಟ್ ಮತ್ತೊಮ್ಮೆ ಲಾಕ್ಡೌನ್ ಮಾಡಲು ಸರ್ಕಾರ ನಿರ್ಧರಿಸಿದೆ. ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿರುವ ಸರ್ಕಾರ, ಕಳೆದ ವರ್ಷ ಮೊದಲ ಬಾರಿ ಲಾಕ್ಡೌನ್ನಂತೆಯೇ ನಿಯಮಗಳು ಜಾರಿ ಮಾಡಿದೆ. ಮೇ 10ರಿಂದ 24 ರವರೆಗೆ ಲಾಕ್ ಡೌನ್ ಜಾರಿಯಲ್ಲಿರಲಿದೆ. 

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಸಿಎಂ ಯಡಿಯೂರಪ್ಪ, ಸೋಮವಾರದಿಂದ ಕರ್ನಾಟಕ ಕಂಪ್ಲೀಟ್ ಲಾಕ್ ಡೌನ್ ಆಗಿರಲಿದೆ.  ಬೆಳಗ್ಗೆ 6ರಿಂದ ಸಂಜೆ 6ರ ವರೆಗೂ ಹಾಲಿನ ಬೂತ್ ಗಳು ತೆರೆದಿರಲಿವೆ. ಕೈಗಾರಿಕೆ, ಹೋಟೆಲ್, ಬಾರ್, ಪಬ್ ಗಳು ಸಂಪೂರ್ಣವಾಗಿ ಕ್ಲೋಸ್ ಆಗಿರಲಿವೆ. ನಿಗದಿತ ಸಮಯದಲ್ಲಿ ಮಾತ್ರ ಅಗತ್ಯ ವಸ್ತುಗಳ ಖರೀದಿ, ಮನೆ ಬಿಟ್ಟು ಜನರು ಯಾರೂ ಆಚೆ ಬರುವ ಹಾಗಿಲ್ಲ. ಬಸ್, ಕ್ಯಾಬ್, ಟ್ಯಾಕ್ಸಿ, ಆಟೋ ಸಂಚಾರಗಳೂ ಬಂದ್ ಆಗಿರಲಿದೆ. 

ಹೋಟೆಲ್ ಮತ್ತು ರೆಸ್ಟೋರೆಂಟ್ಗಳಲ್ಲಿ ಪಾರ್ಸೆಲ್ ಗೆ ಅವಕಾಶವಿದೆ. ಮೆಡಿಕಲ್ ಶಾಪ್ಗಳು, ಆಸ್ಪತ್ರೆಗಳಿಗೆ ಯಾವುದೇ ನಿರ್ಬಂಧವಿಲ್ಲ.  ದಿನಸಿ, ತರಕಾರಿ, ಹಣ್ಣು-ಹೂಗಳ ಖರೀದಿಗೆ ಬೆಳಗ್ಗೆ 6ರಿಂದ 10 ಗಂಟೆಯವರೆಗೂ ಅವಕಾಶವಿರಲಿದೆ. ಸರ್ಕಾರಿ ಕಚೇರಿಗಳು ಶೇ.50 ರಷ್ಟು ಕಾರ್ಯ ನಿರ್ವಹಿಸಲಿವೆ. ಈಗಾಗಲೇ ನಿಗಧಿಯಾಗಿರುವ ಮದುವೆ ಸಮಾರಂಭಗಳಿಗೆ ಕೇವಲ 50 ಜನರಿಗೆ ಅವಕಾಶವಿರುತ್ತದೆ.  ಸರಕು ಸಾಗಾಟ ವಾಹನಗಳಿಗೆ ಅವಕಾಶವಿದೆ. 

ಇವನ್ನು ಹೊರತುಪಡಿಸಿ ಜನ ಅನಗತ್ಯವಾಗಿ ಓಡಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.