ರಾಜ್ಯದಲ್ಲಿ ಮೇ 12 ನಂತರವೂ ಮತ್ತೆ ಲಾಕ್ ಡೌನ್ ವಿಸ್ತರಣೆಯಾಗುತ್ತಾ..?!

Updated: Wednesday, May 5, 2021, 10:14 [IST]

ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ನಿಮಿಷ ನಿಮಿಷಕ್ಕೂ ಏರಿಕೆಯಾಗುತ್ತಿದೆ. ಈಗಾಗಲೇ ಎರಡು ಕೋಟಿ ಜನರು ಸೋಂಕಿತರಿದ್ದಾರೆ. ಅದರಲ್ಲೂ ಕರ್ನಾಟಕದಲ್ಲಂತೂ ಪರೀಸ್ಥಿತಿ ಕೈ ಮೀರಿ ಹೋಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಅನ್ನು ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಲಾಕ್ ಡೌನ್ ಇದ್ರೂ ಸೋಂಕಿತರ ಸಖ್ಯೆ ಮಾತ್ರ ಏರುತ್ತಲೇ ಇದೆ. 

ಇದರಿಂದ ಆತಂಕಗೊಂಡಿರುವ ಸರ್ಕಾರ ಮೇ 12 ರ ಬಳಿಕವೂ ಲಾಕ್ ಡೌನ್ ಮುಂದುವರಿಸಲು ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ. ಮೇ ತಿಂಗಳಲ್ಲಿ ಕೊರೊನಾ ಎರಡನೇ ಅಲೆ ಹರಡುವಿಕೆ ಎಚ್ಚಿರುವುದರಿಂದ ಲಾಕ್ ಡೌನ್ ಈ ತಿಂಗಳು ಪೂರಾ ಮುಂದುವರಿಸಲು ನಿರ್ಧರಿಸಲಾಗಿದೆ.  

ಇನ್ನು ಭಾರತದಲ್ಲಿ ಕೊರೊನಾ ಸೋಂಕಿನ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಮೆರಿಕದ ಶ್ವೇತಭವನದ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆಂಥೋನಿ ಫೌಸಿ, ದೇಶಾದ್ಯಂತ ಲಾಕ್ ಡೌನ್ ಹೇರಲು ಶಿಫಾರಸು ಮಾಡಿದ್ದಾರೆ.ಅಲ್ಲದೇ, ಸಾಮೂಹಿಕ ಲಸಿಕೆ ಅಭಿಯಾನ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮೇಕ್ ಶಿಫ್ಟ್  ಆಸ್ಪತ್ರೆಗಳನ್ನು ಸ್ಥಾಪಿಸುವಂತೆ ಸಲಹೆ ನೀಡಿದ್ದಾರೆ.

ಆಸ್ಪತ್ರೆಗಳು, ಬೆಡ್ , ಆಕ್ಸಿಜನ್ ಪೂರೈಕೆಯಲ್ಲಿ ಕೊರತೆ ದಿನ ದಿನಕ್ಕೂ ಹೆಚ್ಚಾಗುತ್ತಿದೆ. ಆದ್ದರಿಂದ ಇತರ ರಾಷ್ಟ್ರಗಳು ಭಾರತದ ನೆರವಿಗೆ ನಿಲ್ಲಬೇಕಾಗಿದೆ. ಹೆಚ್ಚಿನ ಸಂಖ್ಯೆಯ ಜನರಿಗೆ ಲಸಿಕೆ ಹಾಕಬೇಕಾಗಿದೆ. ಭಾರತವೇ ತಯಾರಿಸಿರುವ ಎರಡು ಲಸಿಕೆಗಳಿವೆ.ಇದರೊಂದಿಗೆ ಇತರ ರಾಷ್ಟ್ರಗಳಿಂದ ಲಸಿಕೆ ಖರೀದಿಸಬೇಕು, ಭಾರತಕ್ಕೆ ಲಸಿಕೆ ಪೂರೈಸಲು ಅಮೆರಿಕ, ರಷ್ಯಾದಂತಹ ರಾಷ್ಟ್ರಗಳು ಮುಂದಾಗಬೇಕಿದೆ. 

ಸದ್ಯದ ಪರಿಸ್ಥಿತಿಯಲ್ಲಿ ದೇಶಾದ್ಯಂತ ಲಾಕ್ ಡೌನ್ ಮಾಡುವುದೇ ಉತ್ತಮ. ಕಳೆದ ವರ್ಷ ಚೀನಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ರಾಷ್ಟ್ರಗಳು ನಿಗದಿತ ಅವಧಿವರೆಗೂ ಸಂಪೂರ್ಣ ಲಾಕ್ ಡೌನ್ ಮಾಡಿದ್ದರಿಂದ ಆ ರಾಷ್ಟ್ರಗಳಲ್ಲಿ ಸೋಂಕಿನ ಸಂಖ್ಯೆ ಕಡಿಮೆಯಾಗಿದೆ. ಆರು ತಿಂಗಳ ಕಾಲ ಲಾಕ್ ಡೌನ್ ಮಾಡಬೇಕಾಗಿಲ್ಲ, ಕೆಲವು ವಾರಗಳವರೆಗೂ ಲಾಕ್ ಡೌನ್ ಮಾಡಬೇಕಾಗಿದೆ. ಆಗ ಮಾತ್ರ ಸೋಂಕು ಹರಡದಂತೆ ಸ್ವಲ್ಪ ಮಟ್ಟಿಗೆ ತಡೆಗಟ್ಟಲು ಸಾಧ್ಯವಿದೆ.