ಅಂದು ಮಾಡಿದ ತಪ್ಪಿಗೆ ಇಂದು ಶಿಕ್ಷೆ: ಜೈಲುಪಾಲಾದ ನವಜೋತ್ ಸಿಂಗ್ ಸಿಧು

By Infoflick Correspondent

Updated:Saturday, May 21, 2022, 09:25[IST]

ಅಂದು ಮಾಡಿದ ತಪ್ಪಿಗೆ ಇಂದು ಶಿಕ್ಷೆ: ಜೈಲುಪಾಲಾದ ನವಜೋತ್ ಸಿಂಗ್ ಸಿಧು

ಅದು ಡಿಸೆಂಬರ್ 27 1988. ಪಟಿಯಾಲದ ರಸ್ತೆಯೊಂದರಲ್ಲಿ ತಮ್ಮ ಕಾರನ್ನು ತೆಗೆಯುವಂತೆ ಕೇಳಿದ ವ್ಯಕ್ತಿಯನ್ನು ನವಜೋತ್ ಸಿಂಗ್ ಸಿಧು ಅವರು ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಈ ಸಂಬಂಧ ನವಜೋತ್ ಸಿಂಗ್ ಸಿಧು ಹಾಗೂ ರೂಪಿಂದರ್ ಸಂಧು ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಇನ್ನು ಇವರಿಬ್ಬರಿಂದ ಥಳಿತಕ್ಕೊಳಗಾದ ಆ ವ್ಯಕ್ತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. 34 ವರ್ಷಗಳ ಕಾಲ ಈ ಪ್ರಕರಣ ಕೋರ್ಟ್ ನಲ್ಲಿತ್ತು. ಇದೀಗ ನ್ಯಾಯಾಲಯ ತೀರ್ಪು ನೀಡಿದೆ.

1988 ರ ರೋಡ್ ರೇಜ್ ಪ್ರಕರಣ ಸಂಬಂಧ ಬರೋಬ್ಬರಿ 34 ವರ್ಷಗಳ ಬಳಿಕ ಮಾಜಿ ಕ್ರಿಕೆಟಿಗ, ರಾಜಕಾರಣಿಯೂ ಆದ ನವಜೋತ್ ಸಿಂಗ್ ಸಿಧು ಅವರಿಗೆ ಒಂದು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿ ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಿದೆ. ಈ ಪ್ರಕರಣದ ಸುದೀರ್ಘ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಹಾಗೂ ಎಸ್ ಕೆ ಕೌಲ್ ಅವರ ಪೀಠ ಈ ಆದೇಶ ಹೊರಡಿಸಿದೆ. ರಸ್ತೆಯಲ್ಲಿ ನಡೆದ ಗಲಾಟೆಗೆ ಸಂಬಂಧ ಪಟ್ಟಂತೆ, ಮೇ 2018ರಲ್ಲಿ ನವಜೋತ್ ಸಿಂಗ್ ಸಿಧು ಅವರನ್ನು ಆರೋಪ ಮುಕ್ತಗೊಳಿಸಿ, 1 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ನೀಡಲಾಗಿತ್ತು.  

ಆದರೆ 65 ವರ್ಷದ ಸಂತ್ರಸ್ತೆಯ ಕುಟಂಬದವರು ಆದೇಶವನ್ನು ಪ್ರಶ್ನಿಸಿ ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಿತ್ತು. ಈ ಆದೇಶವನ್ನು ಮರುಪರಿಶೀಲಿಸಿದ ಕೋರ್ಟ್, ಅರ್ಜಿಯ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್ ಈಗ ಐಪಿಸಿ ಸೆಕ್ಷನ್ 323ರ ಅಡಿಯಲ್ಲಿ ನವಜೋತ್ ಸಿಂಗ್ ಸಿಧು ಅವರಿಗೆ ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ. ಈ ಪ್ರಕರಣ ಸಂಬಂಧ 2018ರಲ್ಲಿ ಪಂಜಾಬ್ ಮತ್ತು ಹರಿಯಾಣ ಕೋರ್ಟ್ ಸಿಧುಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಇದೀಗ ಮತ್ತೆ ಜೈಲು ಶಿಕ್ಷೆ ವಿಧಿಸಿದೆ.