ಒಬ್ಬ ಗಂಡನನ್ನು ಪಾಲು ಮಾಡಿಕೊಂಡ ಇಬ್ಬರು ಪತ್ನಿಯರು ; ಪತಿರಾಯನ ವಿಚಿತ್ರ ಪುರಾಣ
Updated:Wednesday, March 30, 2022, 12:24[IST]

ಮನೆ, ಭೂಮಿ, ಚಿನ್ನಾಭರಣ ಹಾಗೂ ಹಣವನ್ನು ಪಾಲು ಮಾಡಿಕೊಳ್ಳುವುದು ಸಾಮಾನ್ಯ.ಆದರೆ ಇಲ್ಲೊಂದೆಡೆ, ಗಂಡನನ್ನು ಇಬ್ಬರು ಹೆಂಡತಿಯರು ಪಾಲು ಮಾಡಿಕೊಂಡಿದ್ದಾರೆ. 15 ದಿನ ಒಬ್ಬಳೊಂದಿಗೆ ಉಳಿದ 15 ದಿನ ಮತ್ತೊಬ್ಬಳೊಂದಿಗೆ ಜೀವನ ನಡೆಸುವಂತೆ ಒಪ್ಪಂದ ಮಾಡಿಕೊಂಡಿದ್ದಾರೆ. ಇಬ್ಬರ ಜಗಳ ಮೂರನೇಯವರಿಗೆ ಲಾಭ ಆದರೆ ಇಲ್ಲಿ ಪತಿರಾಯನಿಗೆ ಲಾಭವೊ ನಷ್ಟವೊ ಓದುಗರ ಭಾವಕ್ಕೆ ಬಿಟ್ಟಿದ್ದು, ಹಾಗಾಗಿ ಇತನ ವಿಚಿತ್ರ ಘಟನೆಯೊಮ್ಮೆ ಓದಿಬಿಡಿ.
ಈತ ಆರು ಮಕ್ಕಳ ತಂದೆ! ಗೋರಿಯಾರಿ ಗ್ರಾಮದ ನಿವಾಸಿ ಕೆಲವು ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿದ್ದು, ಇದರ ಮಧ್ಯೆ ಬೇರೊಬ್ಬ ಮಹಿಳೆಯನ್ನೂ ಆತ ಗುಟ್ಟಾಗಿ ಮದುವೆ ಮಾಡಿಕೊಂಡಿದ್ದಾನೆ. ಎರಡನೇ ಹೆಂಡ್ತಿಗೂ ಹೆಣ್ಣು ಮಗುವಿದೆ. ಗಂಡ ಈಗಾಗಲೇ ಮದುವೆಯಾಗಿರುವ ವಿಷಯ ಹೆಂಡತಿಗೆ ಗೊತ್ತಾಗಿದೆ. ಇದಕ್ಕೆ ಆಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾಳೆ.
ಇಬ್ಬರು ಪತ್ನಿಯರೂ ಗಂಡನನ್ನು ಬಿಟ್ಟುಕೊಡಲು ಒಪ್ಪಲಿಲ್ಲ. ಗಂಡನೂ ತನಗೆ ಇಬ್ಬರು ಪತ್ನಿಯರು ಬೇಕು ಎನ್ನುತ್ತಾನೆ. ಅತ್ತ ನನ್ನ ಗಂಡ ನನಗೇ, ನನಗೇ ಬೇಕು, ನನ್ನೊಂದಿಗೇ ಇರಬೇಕು ಎಂದು ಪತ್ನಿಯರಿಬ್ಬರೂ ಪಟ್ಟು ಹಿಡಿದಿದ್ದರು. ಹಾಗಾಗಿ ಪ್ರಕರಣ ಪೋಲಿಸ್ ಮೆಟ್ಟಿಲೇರಿ ಇತ್ಯರ್ಥವಾಗಿದೆ. ಇಬ್ಬರೂ ಪತ್ನಿಯರು ಗಂಡನನ್ನ ಹಂಚಿಕೊಂಡಿದ್ದಾರೆ.
ಪರಸ್ಪರ ಮಾತುಕತೆ ನಡೆಸಿದ ಪೂರ್ಣಿಯಾ ಪೊಲೀಸ್ ಕುಟುಂಬ ಸಲಹಾ ಕೇಂದ್ರವು (ಪರಿವಾರ ಪ್ರಮರ್ಶ್ ಕೇಂದ್ರ) ಮೊದಲ ಪತ್ನಿಯೊಂದಿಗೆ ತಿಂಗಳ ಆರಂಭದ 15 ದಿನ ಹಾಗೂ 2ನೇ ಪತ್ನಿಯೊಂದಿಗೆ ತಿಂಗಳ ಕೊನೆಯ 15 ದಿನ ಇರುವಂತೆ ಗಂಡನಿಗೆ ಸೂಚಿಸಿದೆ. ಇಬ್ಬರೂ ಪ್ರತ್ಯೇಕ ಮನೆಗಳಲ್ಲಿ ವಾಸ ಮಾಡುವಂತೆ ಸೂಚನೆ ನೀಡಲಾಗಿದೆ. ಈ ಒಪ್ಪಂದಕ್ಕೆ ಬಾಂಡ್ ಮೇಲೆ ಸಹಿ ಮಾಡಿಸಿಕೊಳ್ಳಲಾಗಿದೆ.