ಈ ಬಾರಿ ಆರ್ಸಿಬಿಯಿಂದ ಯುಜುವೇಂದ್ರ ಚಾಹಲ್ ಏಕೆ ಹೊರ ಬಿದ್ದರು ; ಮನದಾಳದ ಮಾತನ್ನು ಹಂಚಿಕೊಂಡ ಚಾಹಲ್
Updated:Tuesday, March 29, 2022, 10:43[IST]

ಕಳೆದ 8 ವರ್ಷಗಳಿಂದ ಆರ್ಸಿಬಿ ತಂಡದ ಪ್ರಮುಖ ಭಾಗವಾಗಿದ್ದರು ಯುಜುವೇಂದ್ರ ಚಾಹಲ್. ತಂಡ ಟ್ರಂಪ್ಕಾರ್ಡ್ ಸ್ಪಿನ್ನರ್ ಆಗೊ ಮಿಂಚಿದ್ದರು ಚಾಹಲ್. ಹೀಗಾಗಿ ಆರ್ಸಿಬಿ ಚಾಹಲ್ ಅವರನ್ನು ತಂಡಕ್ಕೆ ಮತ್ತೆ ಸೇರ್ಪಡೆಗೊಳಿಸುವ ಪ್ರಯತ್ನ ನಡೆಸಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಈ ಬಾರಿಯ ಟೂರ್ನಿಯಲ್ಲಿ ಆರ್ಸಿಬಿ ತಂಡದಿಂದ ಬೇರ್ಪಟ್ಟಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಹರಾಜಿನಲ್ಲಿ ಚಾಹಲ್ ಅವರನ್ನು ರಾಜಸ್ಥಾನ್ ರಾಯಲ್ಸ್ ಪಡೆದುಕೊಂಡಿದೆ.
ವಿಷಾದಕರ ಸಂಗತಿ ಏನೆಂದರೆ ಆರ್ಸಿಬಿ ರೀಟೆನ್ಶನ್ ಮಾಡಿರಲಿಲ್ಲ. ನಂತರ ಹರಾಜಿನಲ್ಲಿಯೂ ಆರ್ಸಿಬಿ ಚಾಹಲ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸುವ ಪ್ರಯತ್ನವನ್ನೂ ನಡೆಸಿರಲಿಲ್ಲ. ಈ ಬಗ್ಗೆ ಅಭಿಮಾನಿಗಳ ಎದುರು ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ ಚಾಹಲ್.
ನಾನು ಆರ್ಸಿಬಿ ತಂಡದೊಂದಿಗೆ ಭಾವನಾತ್ಮಕವಾಗಿ ಬೆರೆತುಕೊಂಡಿದ್ದೇನೆ. ಆರ್ಸಿಬಿ ಹೊರತುಪಡಿಸಿ ಬೇರೆ ತಂಡದ ಪರವಾಗಿ ಆಡುತ್ತೇನೆಂದು ನಾನು ಊಹಿಸಿಯೂ ಇರಲಿಲ್ಲ. ಜನರು ಈಗಲೂ ನನ್ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಯಾಕೆ ನೀವು ಆರ್ಸಿಬಿ ತಂಡದಲ್ಲಿ ಹೆಚ್ಚಿನ ಹಣವನ್ನು ಕೇಳಿದ್ದೀರಿ ಎಂದು ಪ್ರಶ್ನಿಸುತ್ತಾರೆ. ಆದರೆ ಸತ್ಯ ಬೇರೆಯೇ ಇದೆ"
ಸತ್ಯ ಏನೆಂದರೆ ಆರ್ಸಿಬಿ ನಿರ್ದೇಶಕ ಮೈಕ್ ಹಸನ್ ನನಗೆ ಕರೆ ಮಾಡಿ, ಯುಜಿ ಈ ಬಾರಿ ನಾವು ಮೂರು ರೀಟೆನ್ಶನ್ ಮಾತ್ರವೇ ಮಾಡಿಕೊಳ್ಳುತ್ತಿದ್ದೇವೆ(ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ಮೊಹಮ್ಮದ್ ಸಿರಾಜ್) ಎಂದಿದ್ದರು. ಅವರು ನನ್ನಲ್ಲಿ ರೀಟೈನ್ ಆಗಲು ಬಯಸುತ್ತೀರಾ ಎಂದಾಗಲಿ ಅಥವಾ ಅವರು ರೀಟೈನ್ ಮಾಡಲು ಬಯಸುವುದಾಗಿ ಯಾವುದೇ ಮಾತನ್ನು ನನ್ನಲ್ಲಿ ಕೇಳಲಿಲ್ಲ.
ನಾನು ಆರ್ಸಿಬಿಯಲ್ಲಿ ಯಾವುದೇ ಹಣದ ಬೇಡಿಕೆಯನ್ನೂ ಇಟ್ಟಿಲ್ಲ ಹಾಗೂ ಅವರೂ ನನ್ನಲ್ಲಿ ಯಾವುದೇ ಆಫರ್ಅನ್ನು ಕೂಡ ನನ್ನ ಮುಂದೆ ಇಡಲಿಲ್ಲ. ಆದರೆ ನಾನು ಯಾವಾಗಲೂ ಆರ್ಸಿಬಿ ಅಭಿಮಾನಿಗಳಿಗೆ ನಿಷ್ಠಾವಂತನಾಗಿರುತ್ತೇನೆ. ಆರ್ಸಿಬಿ ಅಭಿಮಾನಿಗಳನ್ನು ಬಹಳ ಇಷ್ಟ ಪಡುತ್ತೇನೆ". ಇದು ನನಗೆ ಹೊಸ ಪ್ರಯಾಣವಾಗಿದ್ದು ಈ ಪ್ರಯಾಣದ ಬಗ್ಗೆ ನಾನು ಸಾಕಷ್ಟು ಉತ್ಸುಕನಾಗಿದ್ದೇನೆ. ಎಲ್ಲವೂ ಈ ಹಿಂದಿನಂತೆಯೇ ಇರಲಿದ್ದು ಜರ್ಸಿ ಮಾತ್ರವೇ ಬದಲಾಗಲಿದೆ. ಹರಾಜಿನಲ್ಲಿ ಆರ್ಆರ್ ತಂಡ ನನ್ನ ಮೇಲೆ ನಂಬಿಕೆಯಿಟ್ಟು ಬಿಡ್ ಮಾಡಿದೆ" ಎಂದಿದ್ದಾರೆ ಯುಜುವೇಂದ್ರ ಚಾಹಲ್.