Darshan Thoogudeepa : ಮಾಧ್ಯಮದವರ ಬಳಿ ಕ್ಷಮೆಯಾಚಿಸಿದ ಡಿ ಬಾಸ್‌ : ಪತ್ರದ ಸುತ್ತ ಅನುಮಾನಗಳ ಹುತ್ತ

Darshan Thoogudeepa : ಮಾಧ್ಯಮದವರ ಬಳಿ ಕ್ಷಮೆಯಾಚಿಸಿದ ಡಿ ಬಾಸ್‌ : ಪತ್ರದ ಸುತ್ತ ಅನುಮಾನಗಳ ಹುತ್ತ

ಈ ಹಿಂದೆ ಡಿಬಾಸ್‌ ದರ್ಶನ್ ಅವರು ಮಾಧ್ಯಮಗಳ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದ ಆಡಿಯೋ ಒಂದು ವೈರಲ್‌ ಆಗಿತ್ತು. ಈ ಸಂಬಂಧ ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳು ದರ್ಶನ್‌ ಅವರ ಯಾವುದೇ ಸುದ್ದಿಯನ್ನು ಪ್ರಸಾರ ಮಾಡಬಾರದು ಎಂದು ಅಘೋಷಿತವಾಗಿ ನಿರ್ಧರಿಸಿದ್ದವು. ಹೀಗಾಗಿ ಹಲವು ಸಮಯದಿಂದ ದರ್ಶನ್‌ ಅವರಿಗೆ ಸಂಬಂಧಿಸಿದ ಯಾವುದೇ ಸುದ್ದಿಗಳು ಪ್ರಸಾರವಾಗುತ್ತಿರಲಿಲ್ಲ. ಆದರೆ ಈ ಬಗ್ಗೆ ಇದೀಗ ದರ್ಶನ್‌ ಅವರು ಕ್ಷಮೆಯಾಚಿಸಿ ಪತ್ರವನ್ನು ಬರೆದಿದ್ದಾರೆ.

ದರ್ಶನ್‌ ಬರೆದ ಪತ್ರದ ಸಾರಾಂಶ ಹೀಗಿದೆ : ʼ75 ವರ್ಷಗಳ ಇತಿಹಾಸವಿರುವ ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದ ಕೆಲವು ವ್ಯಕ್ತಿಗಳು ಮತ್ತು ಕೆಲವು ಹೆಸರುಗಳು ಮಾತ್ರ ಚರಿತ್ರೆಯಲ್ಲಿ ಉಳಿದಿರುತ್ತವೆ. ಆ ಸಾಲಿನಲ್ಲಿ ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್, ತೂಗುದೀಪ ಶ್ರೀನಿವಾಸ್, ಬಾಲಕೃಷ್ಣ, ದಿನೇಶ್, ಇವರ ಸಮಕಾಲೀನ ದಿಗ್ಗಜರುಗಳನ್ನು ಕರ್ನಾಟಕದ ಜನತೆ ಮೆಚ್ಚಿಕೊಂಡು ಮೆರೆಸಿದರು. ಒಪ್ಪುವ ಮಾಧ್ಯಮಗಳು ಮತ್ತು ದೃಶ್ಯ ಮಾಧ್ಯಮಗಳು ಪ್ರೋತ್ಸಾಹಿಸಿರುತ್ತೀರಿ.  

ಈ ಸಾಲಿನಲ್ಲಿ ಇದ್ದಂತಹ ಕನ್ನಡ ಚಿತ್ರರಂಗ ಮರೆಯಲಾಗದಂತಹ ನಟ ತೂಗುದೀಪ ಶ್ರೀನಿವಾಸ್ ರವರ ಕುಟುಂಬದಿಂದ ಬಂದಂತಹ ಸಣ್ಣ ಕುಡಿ ನಾನು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗ ನನ್ನನ್ನು ಆಶೀರ್ವದಿಸಿ ಪ್ರೋತ್ಸಾಹಿಸಿ ಹಲವಾರು ಬಾರಿ ನಾನು ಮಾಡಿರುವ ಪಾತ್ರಗಳ ಬಗ್ಗೆ ವಿಶ್ಲೇಷಣೆ ಮಾಡಿ, ನನ್ನ ಪಾತ್ರದಲ್ಲಿರುವ ತಪ್ಪುಗಳನ್ನು ತಿದ್ದಿ ಹೇಳಿರುವಿರಿ, ನಾನು ಸಹ ಮುಂದಿನ ದಿನಗಳಲ್ಲಿ ಮಾಡಿರುವಂತೆ ಚಿತ್ರಗಳಲ್ಲಿ ನನ್ನ ಪಾತ್ರಗಳಲ್ಲಿ ಬರುವ ತಪ್ಪುಗಳ ಬಗ್ಗೆ ಎಚ್ಚೆತ್ತುಕೊಂಡು ಉತ್ತಮ ಚಿತ್ರಗಳನ್ನು ಆಯ್ಕೆ ಮಾಡಿಕೊಂಡಿರುವೆನು.

ಅದೇ ರೀತಿಯಲ್ಲಿ ನಿಜ ಜೀವನದಲ್ಲಿ ಸಹ. ಯಾವುದೋ ಒಂದು ಗಳಿಗೆಯಲ್ಲಿ ಕೆಲವು ಅಚಾತುರ್ಯದಿಂದ ಮಾತನಾಡಿರುತ್ತೇನೆ. ಮಾಧ್ಯಮ ಸಹೋದರರಿಗೆ ಸಹೋದರಿಯರಿಗೆ ನೋವು ಉಂಟಾಗಿರುವುದರಿಂದ ಅದನ್ನು ನಾನು ವಿಷಾದಿಸುತ್ತೇನೆ. ಜೀವನವೆಂಬುದು ಬಹಳ ಅಮೂಲ್ಯ ಹಾಗೂ ತುಂಬಾ ಚಿಕ್ಕದ್ದು. ಈ ಚಿಕ್ಕ ಸಮಯದಲ್ಲಿ ನಗು ನಗುತಾ ಬಾಳೋಣ, ನನ್ನ ಈ ಭಾವನೆಯನ್ನು ನನ್ನ ಎಲ್ಲಾ ಮಿತ್ರರು ಹಾಗೂ ಅಭಿಮಾನಿಗಳು ಅರ್ಥ ಮಾಡಿಕೊಂಡು ಗೌರವಿಸಬೇಕು.... ಇಂತಿ ನಿಮ್ಮ ದಾಸ.. ಎಂದು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.


ಹೀಗೆ ಪತ್ರದಲ್ಲಿ ಬರೆದಿದ್ದು, ಎಲ್ಲಾ ಮಾಧ್ಯಮಗಳಿಗೂ ತಲುಪಿಸಿದ್ದಾರೆ. ಆದರೆ ಈ ಪತ್ರ ನಿಜವಾಗಿಯೂ ದರ್ಶನ್‌ ಅವರೇ ಬರೆದು ಕಳಿಸಿದ್ದೇ ಅಥವಾ ಇದೊಂದು ನಕಲಿ ಪತ್ರವೇ ಎಂಬ ಅನುಮಾನವೂ ಶುರುವಾಗಿದೆ. ಸದ್ಯ ಈ ಪತ್ರ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.