ವರಮಹಾಲಕ್ಷ್ಮೀ ಹಬ್ಬಕ್ಕೆ ಮಹಿಳೆಯರಿಗೆ ಭರ್ಜರಿ ಗಿಫ್ಟ್ !! ಗೃಹಲಕ್ಷ್ಮಿ ಎಷ್ಟು ತಿಂಗಳ ಹಣ ಬಿಡುಗಡೆ ?

ವರಮಹಾಲಕ್ಷ್ಮೀ ಹಬ್ಬಕ್ಕೆ ಮಹಿಳೆಯರಿಗೆ ಭರ್ಜರಿ  ಗಿಫ್ಟ್ !! ಗೃಹಲಕ್ಷ್ಮಿ  ಎಷ್ಟು ತಿಂಗಳ ಹಣ ಬಿಡುಗಡೆ ?

ಗೃಹಲಕ್ಷ್ಮಿ ಯೋಜನೆಯ 2025–26ನೇ ಸಾಲಿನ ಮೂರನೇ ಕಂತಿನ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಮಾಹಿತಿ ನೀಡಿದ್ದಾರೆ. ತಾಂತ್ರಿಕ ಕಾರಣಗಳಿಂದ ವಿಳಂಬಗೊಂಡಿದ್ದ ಈ ಹಣವನ್ನು ಇದೀಗ ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ. ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ರಾಜ್ಯದ ಮಹಿಳೆಯರಿಗೆ ಸಿಹಿಸುದ್ದಿ ಸಿಕ್ಕಿದ್ದು, ಈ ಯೋಜನೆಯ ಹಣ ಬಿಡುಗಡೆಗೊಂಡಿದೆ.

ಮೇ ತಿಂಗಳ ಹಣವನ್ನು ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದ್ದು, ಜೂನ್ ಮತ್ತು ಜುಲೈ ತಿಂಗಳ ಹಣಕ್ಕಾಗಿ ಮಹಿಳೆಯರು ನಿರೀಕ್ಷೆಯಲ್ಲಿದ್ದರು. ಇದೀಗ ಈ ಎರಡು ತಿಂಗಳ ಹಣವನ್ನು ಕೂಡ ಖಾತೆಗೆ ಜಮಾ ಮಾಡಲಾಗುತ್ತಿದೆ. ರಾಜ್ಯದ ಸುಮಾರು 1.24 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದು, ಪ್ರತಿ ತಿಂಗಳು ₹2000 ಪಡೆಯುತ್ತಿದ್ದಾರೆ. ಈ ಯೋಜನೆ ಜಾರಿಯಾದ ದಿನದಿಂದಲೂ ತಾಂತ್ರಿಕ ಸಮಸ್ಯೆ, ಖಾತೆ ಪರಿಶೀಲನೆ, ನಿರ್ವಹಣಾ ವಿಳಂಬ ಮತ್ತು ಅನುದಾನ ಕೊರತೆಯಂತಹ ಅಡೆತಡೆಗಳು ಎದುರಾಗುತ್ತಲೇ ಇವೆ.

ಈ ಕುರಿತು ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಹೆಚ್.ಎಂ. ರೇವಣ್ಣ ಅವರು ಮಾತನಾಡುತ್ತಾ, “ಪ್ರತಿ ತಿಂಗಳು ಹಣ ನೀಡಲು ಕೆಲವು ತೊಡಕುಗಳಿವೆ. ಹೀಗಾಗಿ ನಾವು ಮೂರು ತಿಂಗಳಿಗೊಮ್ಮೆ ಹಣ ನೀಡುತ್ತಿದ್ದೇವೆ. ಜಿಎಸ್‌ಟಿ ಸಂಬಂಧಿತ ಸಮಸ್ಯೆಯಿಂದ 1.20 ಲಕ್ಷ ಜನರಿಗೆ ಹಣ ಹೋಗಿರಲಿಲ್ಲ. ಈಗ 58 ಸಾವಿರ ಜನರ ಸಮಸ್ಯೆ ಬಗೆಹರಿಸಿದ್ದೇವೆ. ಉಳಿದವರ ಸಮಸ್ಯೆ ಕೂಡ ಶೀಘ್ರದಲ್ಲೇ ಬಗೆಹರಿಸುತ್ತೇವೆ,” ಎಂದು ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ನಿವಾಸ ಅವರು ಪ್ರಕಟಣೆಯಲ್ಲಿ, “ಪಂಚ ಗ್ಯಾರಂಟಿ ಯೋಜನೆಯ ಭಾಗವಾಗಿರುವ ಗೃಹಲಕ್ಷ್ಮಿ ಯೋಜನೆಯ ಹಣ ಡಿಬಿಟಿ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗುತ್ತಿದೆ. ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಈ ಹಣ ಬಿಡುಗಡೆ ಮಾಡಲಾಗಿದೆ,” ಎಂದು ತಿಳಿಸಿದ್ದಾರೆ. ಕೆಲ ಜಿಲ್ಲೆಗಳಲ್ಲಿ ಇನ್ನೂ ಮೂರು-ನಾಲ್ಕು ತಿಂಗಳ ಹಣ ಬಾಕಿ ಉಳಿದಿದ್ದು, ಮಹಿಳೆಯರು ತಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ.