ಎಸ್. ನಾರಾಯಣ್ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ!!

ಎಸ್. ನಾರಾಯಣ್ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ!!

ಖ್ಯಾತ ಕನ್ನಡ ಚಿತ್ರ ನಿರ್ದೇಶಕ ಎಸ್. ನಾರಾಯಣ್, ಅವರ ಪತ್ನಿ ಭಾಗ್ಯಲಕ್ಷ್ಮಿ ಮತ್ತು ಪುತ್ರ ಪವನ್ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪದಡಿ ಎಫ್ಐಆರ್ ದಾಖಲಾಗಿದೆ. ಈ ಪ್ರಕರಣವು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪವನ್ ಪತ್ನಿ ಪವಿತ್ರಾ ಅವರು ದೂರು ನೀಡಿರುವುದಾಗಿ ವರದಿಯಾಗಿದೆ.

2021ರಲ್ಲಿ ಪವನ್ ಮತ್ತು ಪವಿತ್ರಾ ಅವರ ಮದುವೆ ನಡೆದಿತ್ತು. ಮದುವೆಯ ಸಂದರ್ಭದಲ್ಲಿ ₹1 ಲಕ್ಷ ಮೌಲ್ಯದ ಉಂಗುರ ಮತ್ತು ಮದುವೆ ಖರ್ಚು ಪೂರೈಸಲಾಗಿತ್ತು. ನಂತರ ಪವನ್ ಅವರು 'ಕಲಾ ಸಾಮ್ರಾಟ್ ಟೀಂ ಅಕಾಡಮಿ' ಎಂಬ ಫಿಲ್ಮ್ ಇನ್ಸ್ಟಿಟ್ಯೂಟ್ ಆರಂಭಿಸಲು ಪವಿತ್ರಾ ಅವರ ಬಳಿ ಹಣ ಕೇಳಿದ್ದಾರಂತೆ. ಪವಿತ್ರಾ ಅವರು ತಾಯಿಯ ಒಡವೆಗಳನ್ನು ಅಡವಿಟ್ಟು ಹಣ ನೀಡಿದರೂ, ಸಂಸ್ಥೆ ನಷ್ಟದಿಂದ ಮುಚ್ಚಲ್ಪಟ್ಟಿದೆ.

ಈ ನಷ್ಟವನ್ನು ಪೂರೈಸಲು ಪವಿತ್ರಾ ಅವರು ₹10 ಲಕ್ಷ ಸಾಲ ಮಾಡಿ ಪವನ್‌ಗೆ ನೀಡಿದರೂ, ಪವನ್ ಮತ್ತು ಅವರ ತಾಯಿ ಭಾಗ್ಯಲಕ್ಷ್ಮಿ ಅವರು ಪವಿತ್ರಾ ಮೇಲೆ ಹಲ್ಲೆ ನಡೆಸಿ ಹಣ ತರುವಂತೆ ಒತ್ತಾಯ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಪವಿತ್ರಾ ಅವರನ್ನು ಮನೆಯಿಂದ ಹೊರಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪವಿತ್ರಾ ಅವರು ತಮ್ಮ ಪತಿ, ಮಾವ ಮತ್ತು ಅತ್ತೆಯ ವಿರುದ್ಧ ದೂರು ನೀಡಿದ್ದು, “ನನಗೆ ಮತ್ತು ನನ್ನ ಮಗನಿಗೆ ತೊಂದರೆಯಾದರೆ ಈವರು ಕಾರಣ” ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣವು ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿದ್ದು, ನಾರಾಯಣ್ ಕುಟುಂಬದ ವಿರುದ್ಧ ಗಂಭೀರ ಆರೋಪಗಳು ಹೊರಬಿದ್ದಿವೆ.