ಸ್ವತಃ ತನ್ನ ಕೈಯ್ಯಾರೆ ವೆಂಕಟೇಶ್ವರನ ಚಿತ್ರ ಬಿಡಿಸಿದ ಖ್ಯಾತ ನಟ ಯಾರು ಗೊತ್ತಾ ನೋಡಿ…?

Updated: Sunday, January 17, 2021, 12:15 [IST]

ಒಂದು ಸಿನಿಮಾ ಸೂಪರ್ ಹಿಟ್ ಆಗಲು ಕೇವಲ ನಾಯಕ ನಾಯಕಿಯರಿಂದ ಮಾತ್ರ ಸಾಧ್ಯವಾಗುವುದಿಲ್ಲ. ಚಿತ್ರದ ಕಥೆ ಬಹಳ ಗಟ್ಟಿಯಾಗಿರಬೇಕು ಮತ್ತು ಕಥೆ ಬಹಳ ಚೊಕ್ಕವಾಗಿರಬೇಕು ಜೊತೆಗೆ ನಿರ್ದೇಶನ , ಸಂಭಾಷಣೆ , ತಾಂತ್ರಿಕತೆ ಎಲ್ಲ ಕಥೆಗೆ ಪೂರಕವಾಗಿರಬೇಕು.ಹಾಗೆ ಕಥೆಯಲ್ಲಿನ ಪಾತ್ರಗಳು ಜೀವ ತುಂಬಿ ನಟಿಸಿದಾಗ ಮಾತ್ರ ಆ ಚಿತ್ರ ದೊಡ್ಡ ಸಕ್ಸಸ್ ಕಾಣುತ್ತದೆ. ಇದೆಲ್ಲದಿಕ್ಕಿಂತ ಹೆಚ್ಚಾಗಿ ಸಿನಿಮಾಗೆ ಹಾಸ್ಯವೂ ಕೂಡ ಬಹಳ ಮುಖ್ಯವಾಗಿರುತ್ತದೆ. ಹಾಸ್ಯನಟರು ಸಿನಿಮಾದ ಒಂದು ಮುಖ್ಯ ಭಾಗವಾಗುತ್ತಾರೆ. ಹೀಗೆ ತೆಲುಗು ಚಿತ್ರರಂಗದಲಿ ಹಾಸ್ಯ ದಿಗ್ಗಜ ಬ್ರಹ್ಮಾನಂದಂ ಅವರು ತೆರೆಮೇಲೆ ಎಲ್ಲರನ್ನೂ ನಗಿಸುತ್ತಾ, ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ಜನರನ್ನು ಕರೆತರಲು ಯಶಸ್ವಿಯಾಗಿದ್ದಾರೆ. ಸಾವಿರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಅವರದಾಗಿದ್ದು, ತೆರೆಮೇಲೆ ಇವರನ್ನು ಕಂಡರೆ ಸಾಕು ಪ್ರೇಕ್ಷಕರು ನಕ್ಕು ನಲಿಯುತ್ತಾರೆ.

ಪದ್ಮಶ್ರೀ ಪುರಸ್ಕೃತರಾಗಿರುವ ಬ್ರಹ್ಮಾನಂದಂ ಅವರು ಇಲ್ಲಿಯತನಕ ಕೇವಲ ನಟರಾಗಿ ಎಲ್ಲರಿಗೂ ಪರಿಚಯವಾಗಿದ್ದಾರೆ. ಅಂದಹಾಗೆ, ಅವರೊಳಗೆ ಒಬ್ಬ ಅದ್ಭುತ ಚಿತ್ರ ಕಲಾವಿದನೂ ಕೂಡ ಇದ್ದು, ಅದಕ್ಕೆ ಸಾಕ್ಷಿ ಎಂಬಂತೆ ಅನೇಕ ಸ್ಕೆಚ್‌ಗಳನ್ನು ಅವರು ಬರೆಯುತ್ತಿದ್ದಾರೆ. ಈ ಹಿಂದೆ ಅನೇಕ ಸುಂದರವಾದ ಚಿತ್ರಗಳನ್ನು ನೋಡುಗರನ್ನು ಮುಗ್ಧರನ್ನಾಗಿಸುತ್ತಿದ್ದ ಅವರು, ಇದೀಗ ಶ್ರೀ ವೆಂಕಟೇಶ್ವರ ಸ್ವಾಮಿಯ ಚಿತ್ರ ಬರೆದು ಸುದ್ದಿಯಾಗಿದ್ದಾರೆ. ವಿಶೇಷವೆಂದರೆ, ಈ ಚಿತ್ರಕ್ಕೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿದೆ ಅವರು ಬರೆದಿರುವ ಚಿತ್ರ.  

ವೆಂಕಟೇಶ್ವರ ಸ್ವಾಮಿಯ ಚಿತ್ರ ಬರೆಯಲು ಸುಮಾರು 45 ದಿನಗಳ ಸಮಯ ತೆಗೆದುಕೊಂಡು ಬ್ರಹ್ಮಾನಂದಂ ಅವರು ಈ ಚಿತ್ರವನ್ನು ತೆಲುಗು ಚಿತ್ರರಂಗದ ಖ್ಯಾತ ನಟ ಅಲ್ಲು ಅರ್ಜುನ್‌ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಬ್ರಹ್ಮಾನಂದಂ ಅವರ ಪ್ರೀತಿಯನ್ನು ಕಂಡ ಅಲ್ಲು ಅರ್ಜುನ್‌ ಭಾವುಕರಾಗಿದ್ದು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಖಾತೆಯಲ್ಲಿ ಈ ಪೆನ್ಸಿಲ್ ಸ್ಕೆಚ್ ಅನ್ನು ಶೇರ್ ಮಾಡಿಕೊಂಡಿದ್ದು, ‘ನಟ ಬ್ರಹ್ಮಾನಂದಂ ಅವರಿಂದ ಪಡೆದ, ಬೆಲೆಯನ್ನೇ ಕಟ್ಟಲಾಗದ ಗಿಫ್ಟ್ ಇದು. ಅವರು ಬರೆದಿರುವ ಪೆನ್ಸಿಲ್ ಸ್ಕೆಚ್ ಇದು, ಇದರ ಹಿಂದೆ 45 ದಿನಗಳ ಪರಿಶ್ರಮ ಇದೆ’ ಎಂದು ಬರೆದುಕೊಂಡಿದ್ದಾರೆ.  

ಅಭಿಮಾನಿಗಳ ಜೊತೆಗೆ ರಾಜಕಾರಣಿಗಳೂ ಕೂಡ ಈ ಚಿತ್ರಕ್ಕೆ ಭಾರಿ ಮೆಚ್ಚುಗೆ ಸೂಚಿಸಿದ್ದು ಉಡುಪಿ ಹಾಗೂ ಚಿಕ್ಕಮಗಳೂರು ಕ್ಷೇತ್ರದ ಸಂಸದೆಯಾದ ಶೋಭಾ ಕರಂದ್ಲಾಜೆ ಅವರು ಈ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ‘ತಾವೇ ಬರೆದಿರುವ ಈ ಅದ್ಭುತವಾದ ಚಿತ್ರವನ್ನು ತೆಲುಗು ಚಿತ್ರರಂಗದ ಖ್ಯಾತ ನಟ ಶ್ರೀ ಬ್ರಹ್ಮಾನಂದಂ ಅವರು ನಟ ಅಲ್ಲು ಅರ್ಜುನ್ ಅವರಿಗೆ ಉಡುಗೊರೆಯಾಗಿ ನೀಡಿದರು. ವೆಂಕಟೇಶ್ವರರ ಈ ಅದ್ಭುತ ಚಿತ್ರವನ್ನು ರಚಿಸಲು ಅವರಿಗೆ 45 ದಿನಗಳು ಬೇಕಾದವು. ಹಾಸ್ಯ ಬ್ರಹ್ಮೀ ನಿಮಗೆ ಶುಭಾಶಯಗಳು. ನಮಗೆ ಸ್ಫೂರ್ತಿ ನೀಡಲು ನೀವು ಎಂದಿಗೂ ವಿಫಲರಾಗುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.