ಸಣ್ಣಪುಟ್ಟ ವ್ಯಾಪಾರಿಗಳಿಗೆ ಲಕ್ಷಾಂತರ ಟ್ಯಾಕ್ಸ್ ಕಟ್ಟಲು ನೋಟಿಸ್ ಬಂದಿದ್ದು ಯಾಕೆ? ಶಾಕಿಂಗ್ ಕಾರಣ ಇಲ್ಲಿದೆ !!

ಸಣ್ಣಪುಟ್ಟ ವ್ಯಾಪಾರಿಗಳಿಗೆ ಲಕ್ಷಾಂತರ ಟ್ಯಾಕ್ಸ್ ಕಟ್ಟಲು ನೋಟಿಸ್ ಬಂದಿದ್ದು ಯಾಕೆ? ಶಾಕಿಂಗ್ ಕಾರಣ ಇಲ್ಲಿದೆ !!

ಈ ಸಂಬಂಧ ವಾಣಿಜ್ಯ ಇಲಾಖೆ ಸ್ಪಷ್ಟನೆ ನೀಡಿದೆ. ಮಾಧ್ಯಮಗಳಲ್ಲಿ ಸಣ್ಣಪುಟ್ಟ ವರ್ತಕರಿಗೆ ವಾಣಿಜ್ಯ ತೆರಿಗೆ ಇಲಾಖೆಯು ನೀಡಿರುವ ನೋಟಿಸ್​​ಗಳ ಬಗ್ಗೆ ವರದಿಯಾಗಿದೆ. ಜುಲೈ 1, 2017ರಿಂದ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯು ದೇಶಾದ್ಯಂತ ಜಾರಿಗೆ ಬಂದಿದೆ. ಈ ಕಾಯ್ದೆಯ ಕಲಂ 22ರ ಅನ್ವಯ ಸರಕು ಪೊರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ 40 ಲಕ್ಷ ರೂ.ಗಳನ್ನು ಮೀರಿದರೆ ಅಥವಾ ಸೇವೆಗಳ ಪೂರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ 20 ಲಕ್ಷ ರೂ.ಗಳನ್ನು ಮೀರಿದರೆ ಜಿಎಸ್​​ಟಿ ನೋಂದಣಿ ಪಡೆಯುವುದು ಕಡ್ಡಾಯವಾಗಿದೆ. ಈ ಸಮಗ್ರ ವಹಿವಾಟಿನಲ್ಲಿ (exempted & Taxable) ಸರಕು ಮತ್ತು ಸೇವೆಗಳು ಸೇರಿದೆ. ಆದರೆ ತೆರಿಗೆ ಬಾಧ್ಯತೆಯು Taxable ಸರಕುಗಳು/ಸೇವೆಗಳಿಗೆ ಮಾತ್ರ ಅನ್ವಯವಾಗುತ್ತದೆ. ತೆರಿಗೆ ಬಾಧ್ಯತೆಯು ಮಾರಾಟ ಮಾಡಿದ ಸರಕುಗಳ ಪ್ರಕಾರ ನಿರ್ಧರಿಸಲ್ಪಡುತ್ತದೆ.
ವಾಣಿಜ್ಯ ತೆರಿಗೆಗಳ ಇಲಾಖೆ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಮೂಲಕ ವರ್ತಕರು 2021-22ರಿಂದ 2024-25ರ ಸಾಲಿನಲ್ಲಿ ಸ್ವೀಕರಿಸಿರುವ ಹಣದ ವಿವರಗಳನ್ನು ವಿವಿಧ ಯುಪಿಐ ಸೇವೆಗಳ ಪೂರೈಕೆದಾರರಿಂದ ಸಂಗ್ರಹಿಸಲಾಗಿದೆ. ವರ್ತಕರು ಮಾರಾಟದ ಹಣವನ್ನು (ಯುಪಿಐ) ಮಾತ್ರವಲ್ಲದೇ, ನಗದು ಮತ್ತು ಇತರ ವಿಧಾನಗಳಲ್ಲಿ ಕೂಡ ಪಡೆಯುತ್ತಾರೆ. ಹಾಗಾಗಿ, ಯುಪಿಐ ಮೂಲಕ 40 ಲಕ್ಷ ರೂ.ಗಳಿಗಿಂತ ಹೆಚ್ಚಿನ ಹಣವನ್ನು ಪಡೆದಿರುವ ವರ್ತಕರ ವಾರ್ಷಿಕ ವಹಿವಾಟು ಇನ್ನೂ ಗಣನೀಯವಾಗಿ ಹೆಚ್ಚಾಗಿದೆ. ಸದರಿ ಮಾಹಿತಿಯನ್ನು ಪರಿಶೀಲಿಸಿ, 40 ಲಕ್ಷ ರೂ.ಗಳಿಗಿಂತ ಹೆಚ್ಚಿನ ಹಣವನ್ನು ಪಡೆದು ಸರಕು ಮತ್ತು ಸೇವಾ ತೆರಿಗೆ ಕಾಯ್ದೆ-2017ರ ಅಡಿಯಲ್ಲಿ ನೋಂದಣಿಯನ್ನು ಪಡೆಯದೆ, ತೆರಿಗೆ ಪಾವತಿಸದೆ ಇರುವ ವರ್ತಕರಿಗೆ ನೋಟಿಸ್​ ಜಾರಿಗೊಳಿಸಲಾಗಿದೆ ಎಂದು ಇಲಾಖೆಯು ಸ್ಪಷ್ಟಪಡಿಸಿದೆ.ಈ ನೋಟಿಸ್​​ಗಳಿಗೆ, ವರ್ತಕರು ತಾವು ಮಾರಾಟ ಮಾಡಿದ ಸರಕು ಮತ್ತು ಸೇವೆಗಳ ವಿವರಗಳನ್ನು ನೀಡಿ ಸರಿಯಾದ ತೆರಿಗೆಯನ್ನು ಪಾವತಿಸಬೇಕು. ಇಂತಹ ವರ್ತಕರು ತಕ್ಷಣ ನೋಂದಣಿ ಪಡೆಯಬೇಕು. ವಾರ್ಷಿಕ ವಹಿವಾಟು 1.5 ಕೋಟಿ ರೂ.ಗಳಿಗಿಂತ ಕಡಿಮೆ ಇರುವ ಸಣ್ಣ ವರ್ತಕರು ರಾಜಿ ತೆರಿಗೆಯನ್ನು ಆಯ್ಕೆ ಮಾಡಿ, ಇನ್ನುಮುಂದೆ 1% ತೆರಿಗೆ ಪಾವತಿಸಬಹುದಾಗಿದೆ ಎಂದು ವಾಣಿಜ್ಯ ಇಲಾಖೆ ತಿಳಿಸಿದೆ.