ಮದುವೆಯಾದ ಮಹಿಳೆ ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸುವುದು ಎಷ್ಟು ಸರಿ ?

ಮದುವೆಯಾದ ಮಹಿಳೆ ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸುವುದು ಎಷ್ಟು ಸರಿ  ?

ಮದುವೆ ಎಂಬ ಒಂದು ಸಾಮಾಜಿಕ ಒಪ್ಪಂದ ಅಥವಾ ಸಂಸ್ಕಾರವು ಲೈಂಗಿಕ ಮತ್ತು ಇತರ ಭಾವನಾತ್ಮಕ ಅವಶ್ಯಕತೆ ಪೂರೈಸಿಕೊಳ್ಳಲು ಸಮಾಜವು ತನ್ನ ಸದಸ್ಯರುಗಳಿಗೆ ಮಾಡಿಕೊಟ್ಟಿರುವ ಅವಕಾಶ. ಇದು ಸಾಮಾನ್ಯವಾಗಿ ಹೆಚ್ಚು ಕಾಲ ಅಸ್ತಿತ್ವದಲ್ಲಿರುವ ಅಥವಾ ಅಸ್ತಿತ್ವದಲ್ಲಿ ಇರಬೇಕಾದ ಒಂದು ಸಾಮಾಜಿಕ ವ್ಯವಸ್ಥೆ.

ಹೀಗಾಗಿ ಮದುವೆಯಾಗುವಾಗಲೇ ಆದಷ್ಟು ತಮಗೆ ಹೊಂದಾಣಿಕೆ ಆಗುವ ಅಥವಾ ಸಮರ್ಪಕವಾದ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಪರಸ್ಪರ ಅಭಿರುಚಿ ಆಸಕ್ತಿ ವ್ಯಕ್ತಿತ್ವ ಇವುಗಳಿಗೆ ಹೊಂದುವಂತಹ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕಾದದ್ದು ಅತ್ಯಂತ ಅವಶ್ಯಕ.

ಹಾಗೆ ನೋಡಿದರೆ ವಾಸ್ತವದಲ್ಲಿ ಈ ಪ್ರಪಂಚದಲ್ಲಿ 100% ಪರಿಪೂರ್ಣ ವ್ಯಕ್ತಿ ಈ ಜಗತ್ತಿನಲ್ಲಿ ಯಾರೂ ಇರುವುದಿಲ್ಲ. ಅಥವಾ ಯಾವುದೇ ಜೋಡಿ ನೂರಕ್ಕೆ ನೂರರಷ್ಟು ಹೊಂದಿಕೊಂಡು ಬದುಕುತ್ತಿದ್ದಾರೆ ಎಂದು ಹೇಳುವುದು ಕೂಡ ಸಮಂಜಸವಲ್ಲ. ಜಗತ್ತಿನ ಯಾವುದೇ ಎರಡೂ ವ್ಯಕ್ತಿತ್ವಗಳು ಏಕರೂಪದಲ್ಲಿ ಇರುತ್ತವೆ ಎನ್ನಲಾಗದು.

ಆದರೆ ಮದುವೆಯಾದ ನಂತರ ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸಲು ಸಹಜವಾಗಿಯೇ ಮಾನಸಿಕವಾಗಿ ಸಿದ್ದರಾಗಿರಬೇಕು. ಅದು ಸಾಧ್ಯವಾಗದಿದ್ದರೆ ಉದ್ದೇಶಪೂರ್ವಕವಾಗಿಯಾದರೂ ಸಹಜೀವನ ಮಾಡಲು ಪ್ರಯತ್ನ ಮಾಡಬೇಕು.

ಅದನ್ನು ಬಿಟ್ಟು ವಿವಾಹದ ಒಂದು ಚೌಕಟ್ಟಿನಲ್ಲಿ ಇದ್ದುಕೊಂಡು ಹೊರಗಿನ ಸಂಬಂಧಗಳಿಗೆ ಕೈಚಾಚಬಾರದು. ಅದು ಯಾರಿಗೂ ಸಹ ಒಳಿತನ್ನು ಉಂಟು ಮಾಡುವುದಿಲ್ಲ. ಗಂಡ, ಹೆಂಡತಿ ಅವರ ಕುಟುಂಬಗಳು, ಮಕ್ಕಳು ಹೀಗೆ ಎಲ್ಲರೂ ಸಹ ಅನೈತಿಕ ಸಂಬಂಧಗಳಿಗೆ ಬಲಿಪಶುಗಳಾಗುವುದು ಶತಸಿದ್ಧ.

ವಿವಾಹದ ನಂತರದಲ್ಲಿ ಪ್ರೀತಿಯೋ, ಅನೈತಿಕ ಸಂಬಂಧವೋ, ಅತಿಯಾದ ಸ್ನೇಹವೋ, ದೈಹಿಕ ಸಂಬಂಧವೋ ಮಾನಸಿಕ ಸಂಬಂಧವೋ ಯಾವುದೇ ಆಗಲಿ ಅವುಗಳು ಹೆಂಡತಿ ಅಥವಾ ಗಂಡನಿಗೆ ಒಂದು ರೀತಿಯ ಕಿಕ್ ಅನ್ನು, ಲೋಲುಪತೆಯನ್ನು ಅಥವಾ ವಿಲಕ್ಷಣವಾದ ತೃಪ್ತಿಯನ್ನು ಕೊಡಬಹುದೇ ಹೊರತು, ಎಂದಿಗೂ ಸಹ ಮನುಷ್ಯನಿಗೆ ಜೀವಿಸಲು ಅಗತ್ಯವಾದ ಮತ್ತು ಅಗತ್ಯವಾದ ಸಹಜ ನೆಮ್ಮದಿಯನ್ನು ಕೊಡಲಾರವು.

ಇದು ಹೆಣ್ಣುಮಕ್ಕಳಿಗೆ ಮಾತ್ರವಲ್ಲ ಗಂಡಸರಿಗೂ ಕೂಡ …

ದಾಂಪತ್ಯ ಅನ್ನೋ ವಾಹನಕ್ಕೆ ಎರಡು ಚಕ್ರದಂತಿರುವ ಪತಿ ಪತ್ನಿ ಎಂಬುವವರಲ್ಲಿ ಒಬ್ಬರು ಅಲುಗಾಡಿದರೂ ಸಂಸಾರ ಅನ್ನೋ ರಥ ಪತನವಾಗುವುದು ಸತ್ಯ. ದಾಂಪತ್ಯ ಗೀತೆಯ ಗಾಯನದಲ್ಲಿ ಲಯತಪ್ಪಿ ಅಪಸ್ವರವು ಕಾಣಿಸಿಕೊಳ್ಳುತ್ತದೆ.

ಆಗ ಮದುವೆ ವಿವಾಹದ ಉದ್ದೇಶಗಳು ಈಡೇರಿರುವುದಿಲ್ಲ ಅಷ್ಟೇ ಅಲ್ಲ ಕುಟುಂಬಗಳು ಸರ್ವನಾಶವಾಗುತ್ತವೆ. ಇದಕ್ಕೆ ಸಾವಿರಾರು ಉದಾಹರಣೆಗಳನ್ನು ಕೊಡಬಹುದು. ಅಲ್ಲದೆ ಇದು ದಿನನಿತ್ಯ ಸುದ್ದಿಯಲ್ಲಿರುವ ವಿಷಯವಾಗಿದೆ.