ಶಿವರಾತ್ರಿಗೆ ಉಪವಾಸ ಇರಬೇಕೆಂದುಕೊಂಡಿದ್ದೀರಾ? ಆ ದಿನ ಏನು ಸೇವಿಸಬೇಕು, ಏನು ಸೇವಿಸಬಾರದು? ಇಲ್ಲಿದೆ ಮಾಹಿತಿ

ಶಿವರಾತ್ರಿಗೆ ಉಪವಾಸ ಇರಬೇಕೆಂದುಕೊಂಡಿದ್ದೀರಾ? ಆ ದಿನ ಏನು ಸೇವಿಸಬೇಕು, ಏನು ಸೇವಿಸಬಾರದು? ಇಲ್ಲಿದೆ ಮಾಹಿತಿ

ಶಿವರಾತ್ರಿ ಎಂದರೆ ನೆನಪಿಗೆ ಬರುವುದು ಜಾಗರಣೆ, ಉಪವಾಸ. ನಿಯಮಾನುಸಾರ ಪೂಜೆ ಮಾಡಿದರೆ ಶಿವನು ನಿಮಗೆ ಒಲಿಯುತ್ತಾನೆ. ಆದರೆ ಉಪವಾಸ ಮಾಡುವಾಗ ಕೆಲವೊಂದು ಆಹಾರಗಳನ್ನು ಸೇವಿಸಬಾರದು. ಹಬ್ಬದಂದು ಏನೆಲ್ಲಾ ಆಹಾರಗಳನ್ನು ಸೇವಿಸಬೇಕು ಎನ್ನುವುದರ ಬಗ್ಗೆ ನಿಮಗೆ ಮಾಹಿತಿ ಇರಲಿ.

ದೇಶಾದ್ಯಂತ ಮಾರ್ಚ್‌ 8ರಂದು ಶಿವರಾತ್ರಿ ಆಚರಿಸಲಾಗುತ್ತಿದೆ. ಭಕ್ತರು ಶಿವಾಲಯಗಳಿಗೆ ತೆರಳಿ ಭೋಲೇನಾಥನ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸಲು ಎದುರು ನೋಡುತ್ತಿದ್ದಾರೆ. ಶಿವರಾತ್ರಿ ಎಂದರೆ ಹೆಚ್ಚಿನ ಜನರು ಉಪವಾಸ ಮಾಡಿ ಜಾಗರಣೆ ಮಾಡುತ್ತಾರೆ. ಕೆಲವರು ಸಂಪೂರ್ಣ ಉಪವಾಸವಿದ್ದರೆ, ಇನ್ನೂ ಕೆಲವರು ಹಣ್ಣು ಹಂಪಲು ತಿಂದು ದೇವರ ಧ್ಯಾನ ಮಾಡುತ್ತಾರೆ.

ಏಕಾದಶಿಯಂದು ಉಪವಾಸ ಆಚರಿಸಿ ಮರುದಿನ ಉಪವಾಸ ಮುಗಿಸುವ ಸಂಪ್ರದಾಯವಿದೆ. ಉಪವಾಸವಿದ್ದು ಜಾಗರಣೆ ಮಾಡಿದರೆ ಶಿವನು ನಿಮ್ಮನ್ನು ಸಂಪೂರ್ಣವಾಗಿ ಹರಸುವನು. ನೀವು ಕೂಡಾ ಉಪವಾಸ ಮಾಡುವುದಾದರೆ ಯಾವೆಲ್ಲಾ ಆಹಾರ ಪದಾರ್ಥಗಳನ್ನು ತಿನ್ನಬೇಕು? ಯಾವ ಆಹಾರಗಳನ್ನು ತಿನ್ನಬಾರದು ಎಂಬುದನ್ನು ತಿಳಿದುಕೊಳ್ಳಿ.    

ಏನು ಆಹಾರ ಸೇವಿಸಬಹುದು ?

ಉಪವಾಸ ಮಾಡಲು ವಯಸ್ಸಿನ ಮಿತಿ ಇಲ್ಲ. ಆದರೆ ಗ್ಯಾಸ್ಟ್ರಿಕ್‌ ಸಮಸ್ಯೆ ಇರುವವರು, ತಲೆಸುತ್ತಿನ ಸಮಸ್ಯೆ, ಗರ್ಭಿಣಿಯರು, ವೃದ್ಧರು ಹಾಗೇ ವಯೋ ಸಹಜ ಸಮಸ್ಯೆಯಿಂದ ಬಳಲುತ್ತಿರುವವರು ಆದಷ್ಟು ಹಣ್ಣು ಹಂಪಲು, ಲಘು ಫಲಾಹಾರ ಸೇವಿಸಿದರೆ ಸೂಕ್ತ.  ( video credit : shree krishna creations's supriya )

ಶಿವರಾತ್ರಿಯಂದು ಬೇಯಿಸಿದ ಆಲೂಗಡ್ಡೆ, ಹಣ್ಣುಗಳಂಥ ಏಕದಳವಲ್ಲದ ಆಹಾರಗಳನ್ನು ಸೇವಿಸಬಹುದು.

ನಿಮಗೆ ಉಪವಾಸ ಮಾಡುವುದು ಸಮಸ್ಯೆ ಇಲ್ಲ ಎಂದಾದಲ್ಲಿ ಹಣ್ಣು ಹಂಫಲು, ಸಿಹಿ ಗೆಣಸನ್ನು ಸೇವಿಸುವ ಮೂಲಕ ಮಾತ್ರ ಉಪವಾಸ ಮಾಡಬಹುದು.

ಅವಲಕ್ಕಿಗೆ ಮೊಸರು ಅಥವಾ ಹಾಲು, ಬೆಲ್ಲ ಸೇರಿಸಿ ಸಿಹಿ ಅವಲಕ್ಕಿ ಸೇವಿಸಬಹುದು.

ಒಂದು ವೇಳೆ ನಿಮಗೆ ಹಣ್ಣನ್ನು ಹಾಗೇ ತಿನ್ನಲು ಇಷ್ಟವಿಲ್ಲದಿದ್ದರೆ ಫ್ರೂಟ್‌ ಸಲಾಡ್‌, ಫ್ರೂಟ್‌ ಮಿಲ್ಕ್‌ ಶೇಕ್‌ ಸೇವಿಸಬಹುದು.

ಎಲ್ಲಾ ರೀತಿಯ ಡ್ರೈ ಫ್ರೂಟ್ಸ್‌, ಬಾದಾಮಿ ಹಾಲು, ಸಬ್ಬಕ್ಕಿ ಖೀರು, ಹಾಲಿನಿಂದ ಮಾಡಿದ ಇತರ ಯಾವುದೇ ಸಿಹಿ ತಿನಿಸುಗಳನ್ನು ಸೇವಿಸಬಹುದು.

ಏನು ಸೇವಿಸಬಾರದು ?

ಶಿವರಾತ್ರಿಯಂದು ಬೇಳೆಕಾಳು, ಉಪ್ಪು, ಗೋಧಿ, ಅಕ್ಕಿಯಂಥ ಧಾನ್ಯಗಳಿಂದ ತಯಾರಿಸುವ ಆಹಾರ ತಿನ್ನಬಾರದು.

ಹೆಚ್ಚಿನ ಜನರು ಶಿವರಾತ್ರಿಯಂದು ಉಪ್ಪಿಟ್ಟು ಮಾಡುತ್ತಾರೆ, ಕೆಲವರು ರವೆಯಿಂದ ಮಾಡಿದರೆ ಇನ್ನೂ ಕೆಲವರು ಸಾಬೂದಾನದಿಂದ ಮಾಡುತ್ತಾರೆ. ಪ್ರತಿದಿನ ತಯಾರಿಸುವಂತೆ ಉಪ್ಪು ಸೇರಿಸುವುದನ್ನು ನಿಲ್ಲಿಸಿ.

ನೀವು ಸೇವಿಸುವ ಯಾವುದೇ ಆಹಾರ ಪದಾರ್ಥಕ್ಕೆ ಅರಿಶಿನ, ಈರುಳ್ಳಿ, ಬೆಳ್ಳುಳ್ಳಿ ಸೇರಿಸಬೇಡಿ.

ಶಿವರಾತ್ರಿ ಹಬ್ಬದಂದು ಯಾವುದೇ ಕಾರಣಕ್ಕೂ ಮೊಟ್ಟೆ, ಮಾಂಸಾಹಾರ ಸೇವನೆ ಬೇಡ.

ಚಿಪ್ಸ್‌, ಪಕೋಡಾ, ಪಿಜ್ಜಾದಂಥ ಜಂಕ್‌ ಫುಡ್‌ಗಳು ಶಿವರಾತ್ರಿ ಹಬ್ಬದಂದು ನಿಷಿದ್ಧ.