ಹೊಸ ವರ್ಷದ ಆಚರಣಿಗೆ ಕಾದಿದ್ದ ಜನರಿಗೆ ದೊಡ್ಡ ಅಘಾತ!!
ಇಂದು ದೇಶದ ಪ್ರಮುಖ ನಗರಗಳಲ್ಲಿ ಜನರು ಯಾವುದೇ ಸಣ್ಣ ವಸ್ತುವಾದರೂ ಅಂಗಡಿಗೆ ಹೋಗದೆ ನೇರವಾಗಿ ಜೆಪ್ಟೊ, ಬ್ಲಿಂಕಿಟ್, ಫ್ಲಿಪ್‌ಕಾರ್ಟ್ ಮಿನಿಟ್ಸ್ ಹಾಗೂ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮೂಲಕ ಖರೀದಿಸುತ್ತಿದ್ದಾರೆ. ಮನೆಯಲ್ಲೇ ಅಡುಗೆ ಮಾಡುವ ತಾಪತ್ರಯ ತಪ್ಪಿಸಲು, ಹೋಟೆಲ್‌ಗೆ ಹೋಗುವ ಸೋಮಾರಿತನದಿಂದ ಸ್ವಿಗ್ಗಿ ಮತ್ತು ಜೊಮಾಟೊ ಸೇವೆಗಳನ್ನು ಬಳಸುತ್ತಿದ್ದಾರೆ.
ಮುಷ್ಕರದ ಘೋಷಣೆ
ಆದರೆ, ಈ ಸೇವೆಗಳ ಮೇಲೆ ಅವಲಂಬಿತರಾಗಿರುವ ಎಲ್ಲರಿಗೂ ದೊಡ್ಡ ಶಾಕಿಂಗ್ ಸುದ್ದಿ ಎದುರಾಗಿದೆ. ಡಿಸೆಂಬರ್ 31ರಂದು ದೇಶದಾದ್ಯಂತ ಗಿಗ್ ಕಾರ್ಮಿಕರು – ಡೆಲಿವರಿ ಬಾಯ್ಸ್, ರೈಡ್-ಹೇಲಿಂಗ್ ಡ್ರೈವರ್ಸ್, ಫುಡ್ ಡೆಲಿವರಿ ವರ್ಕರ್ಸ್ – ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇದರ ಪರಿಣಾಮವಾಗಿ ಹೊಸ ವರ್ಷದ ಸಂಭ್ರಮಾಚರಣೆಯ ದಿನ ಆಹಾರ, ಪಾನೀಯ, ಆನ್‌ಲೈನ್ ಶಾಪಿಂಗ್ ಹಾಗೂ ರೈಡ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಮುಷ್ಕರದ ಹಿನ್ನೆಲೆ
ಕಡಿಮೆ ವೇತನ: ಗಿಗ್ ಕಾರ್ಮಿಕರು ತಮ್ಮ ಶ್ರಮಕ್ಕೆ ತಕ್ಕ ಸಂಬಳ ಸಿಗುತ್ತಿಲ್ಲವೆಂದು ಆರೋಪಿಸುತ್ತಿದ್ದಾರೆ. ಪ್ರತಿ ಡೆಲಿವರಿ ಅಥವಾ ರೈಡ್‌ಗೆ ನೀಡಲಾಗುವ ಪಾವತಿ ಕಳೆದ ಕೆಲವು ವರ್ಷಗಳಲ್ಲಿ ಕಡಿಮೆಯಾಗಿದ್ದು, ಜೀವನೋಪಾಯ ನಡೆಸಲು ಕಷ್ಟವಾಗುತ್ತಿದೆ.
ಸಾಮಾಜಿಕ ಭದ್ರತೆ ಕೊರತೆ: ಆರೋಗ್ಯ ವಿಮೆ, ನಿವೃತ್ತಿ ಯೋಜನೆ, ಅಪಘಾತ ವಿಮೆ ಮುಂತಾದ ಕಲ್ಯಾಣ ಯೋಜನೆಗಳು ಲಭ್ಯವಿಲ್ಲ. ಇದರಿಂದ ಭವಿಷ್ಯದ ಭದ್ರತೆ ಇಲ್ಲದೆ ಕೆಲಸ ಮಾಡುತ್ತಿದ್ದಾರೆ.
ಅನ್ಯಾಯಕರ ನೀತಿಗಳು: ಕಂಪನಿಗಳು ನಿರಂತರವಾಗಿ ಪೇಮೆಂಟ್ ಸ್ಟ್ರಕ್ಚರ್ ಬದಲಾಯಿಸುತ್ತಿದ್ದು, ಗುರಿ ಒತ್ತಡ ಹೆಚ್ಚಿಸುತ್ತಿವೆ. ಆದಾಯವನ್ನು ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ.
ಹಬ್ಬದ ದಿನಗಳಲ್ಲಿ ಹೆಚ್ಚುವರಿ ಕೆಲಸ: ಹೊಸ ವರ್ಷ, ದೀಪಾವಳಿ, ಕ್ರಿಸ್ಮಸ್ ಮುಂತಾದ ಹಬ್ಬದ ದಿನಗಳಲ್ಲಿ ಹೆಚ್ಚು ಕೆಲಸ ಮಾಡಬೇಕಾದರೂ, ಹೆಚ್ಚುವರಿ ಭತ್ಯೆ ನೀಡಲಾಗುತ್ತಿಲ್ಲ.
ಪರಿಣಾಮ
ಈ ಪ್ರತಿಭಟನೆಯು ಸ್ವಿಗ್ಗಿ, ಜೊಮಾಟೊ, ಜೆಪ್ಟೊ, ಬ್ಲಿಂಕಿಟ್ ಸೇರಿದಂತೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್ ದೈತ್ಯ ಕಂಪನಿಗಳ ಮೇಲೂ ನೇರ ಪರಿಣಾಮ ಬೀರಲಿದೆ. ಹಬ್ಬದ ದಿನಗಳಲ್ಲಿ ಆರ್ಡರ್‌ಗಳ ಸಂಖ್ಯೆ ಗರಿಷ್ಠ ಮಟ್ಟದಲ್ಲಿ ಇರುತ್ತದೆ ಎಂಬುದು ತಿಳಿದಿದ್ದರೂ, ತಮ್ಮ ದೀರ್ಘಕಾಲದ ಸಮಸ್ಯೆಗಳ ಕಡೆಗೆ ಗಮನ ಸೆಳೆಯಲು ಕಾರ್ಮಿಕರು ಈ ಸಮಯವನ್ನು ಆಯ್ದುಕೊಂಡಿದ್ದಾರೆ.
ಕಾರ್ಮಿಕರ ಸಂಕಷ್ಟ
ಗಿಗ್ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳು ದಿನದಿಂದ ದಿನಕ್ಕೆ ತೀವ್ರವಾಗುತ್ತಿವೆ. ಕಡಿಮೆಯಾಗುತ್ತಿರುವ ಲಾಭ, ಅತಿಯಾದ ಕೆಲಸದ ಹೊರೆ ಮತ್ತು ಅಸುರಕ್ಷಿತ ವಿತರಣಾ ಗುರಿಗಳು ಅವರನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿವೆ. ಜೊತೆಗೆ ಕಂಪನಿಗಳು ವಿಧಿಸಿರುವ ಕಠಿಣ ನಿಯಮಗಳು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತಿವೆ. ಯಾವುದೇ ಪೂರ್ವ ಸೂಚನೆ ಇಲ್ಲದೆ ಖಾತೆಗಳನ್ನು ನಿರ್ಬಂಧಿಸುವುದರಿಂದ ಸಾವಿರಾರು ಜನರು ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳುತ್ತಿದ್ದಾರೆ. ಹಬ್ಬಗಳ ಸಮಯದಲ್ಲಿ ಬೇಡಿಕೆ ಹೆಚ್ಚಿದರೂ, ಸರಿಯಾದ ಲಾಭ ಸಿಗುತ್ತಿಲ್ಲ ಎಂಬುದು ಅವರ ಪ್ರಮುಖ ದೂರಾಗಿದೆ.
ಒಟ್ಟಾರೆ, ಈ ಮುಷ್ಕರವು ಹೊಸ ವರ್ಷದ ಸಂಭ್ರಮಾಚರಣೆಯ ದಿನ ಸಾಮಾನ್ಯ ಜನರ ಜೀವನಕ್ಕೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.




