ನಿರುದ್ಯೋಗಿಗಳಿಗೆ ಸರ್ಕಾರದಿಂದ ಭರ್ಜರಿ ದಸರಾ ಗಿಫ್ಟ್!!

ರಾಜ್ಯ ಸರ್ಕಾರ ಉದ್ಯೋಗಾಕಾಂಕ್ಷಿಗಳಿಗೆ ದಸರಾ ಹಬ್ಬದ ಹಿನ್ನೆಲೆಯಲ್ಲಿ ಮಹತ್ವದ ಬಂಪರ್ ಗಿಫ್ಟ್ ನೀಡಿದ್ದು, ಸಿವಿಲ್ ಸೇವಾ ಹುದ್ದೆಗಳಿಗೆ ನೇರ ನೇಮಕಾತಿಯಲ್ಲಿ ವಯೋಮಿತಿಯನ್ನು ಮೂರು ವರ್ಷಗಳವರೆಗೆ ಸಡಿಲಿಕೆ ಮಾಡುವ ಆದೇಶವನ್ನು ಸೋಮವಾರ ಹೊರಡಿಸಿದೆ. ಈ ನಿರ್ಧಾರದಿಂದ ವಿವಿಧ ವರ್ಗಗಳ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗಲಿವೆ.
ವಿವಿಧ ಇಲಾಖೆಗಳ ಮೂಲಕ ನಡೆಯುವ ನೇರ ನೇಮಕಾತಿಗಳಲ್ಲಿ ಭಾಗವಹಿಸುವ ಎಲ್ಲಾ ವರ್ಗಗಳ ಅಭ್ಯರ್ಥಿಗಳಿಗೆ ಈ ವಯೋಮಿತಿ ಸಡಿಲಿಕೆ ಒಂದು ಬಾರಿಗೆ ಅನ್ವಯವಾಗಲಿದೆ. ಈ ಆದೇಶವು 2027ರ ಡಿಸೆಂಬರ್ 31ರೊಳಗೆ ಹೊರಡುವ ಎಲ್ಲಾ ನೇರ ನೇಮಕಾತಿಗಳಿಗೆ ಅನ್ವಯವಾಗುತ್ತದೆ.
ಇತ್ತೀಚೆಗೆ ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು PSI ಮತ್ತು ಕಾನ್ಸಟೇಬಲ್ ಹುದ್ದೆಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಈ ತಿಂಗಳ 6ರಂದು ರಾಜ್ಯ ಸರ್ಕಾರ 2 ವರ್ಷ ವಯೋಮಿತಿ ಸಡಿಲಿಕೆ ಮಾಡುವ ಆದೇಶ ನೀಡಿತ್ತು. ಇದೀಗ ಅದನ್ನು ಮತ್ತಷ್ಟು ವಿಸ್ತರಿಸಿ 3 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ವಿಭಿನ್ನ ವರ್ಗಗಳಿಗೆ ಅನ್ವಯವಾಗುವ ವಯೋಮಿತಿ ಸಡಿಲಿಕೆ ವಿವರಗಳು ಹೀಗಿವೆ:
ಸಾಮಾನ್ಯ ವರ್ಗ: 35 ವರ್ಷದಿಂದ 38 ವರ್ಷ
ಒಬಿಸಿ (OBC): 38 ವರ್ಷದಿಂದ 41 ವರ್ಷ
ಎಸ್‌ಸಿ/ಎಸ್‌ಟಿ/ಪ್ರವರ್ಗ-1: 40 ವರ್ಷದಿಂದ 43 ವರ್ಷ
ಈ ಕ್ರಮದಿಂದ ಹೆಚ್ಚಿನ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಪಡೆಯಲಿದ್ದಾರೆ.