ದೇಶಾದ್ಯಂತ ಹಬ್ಬುತ್ತಿರುವ ಹಕ್ಕಿ ಜ್ವರ; ಕೇಂದ್ರದಿಂದ ಬಿಗಿ ಕ್ರಮ
Updated: Wednesday, January 6, 2021, 18:43 [IST]

ಕೋವಿಡ್ ಮಹಾಮಾರಿಯಿಂದ ಕಂಗೆಟ್ಟಿರುವ ಭಾರತ ಇದೀಗ ಬಹಳ ಅಪಾಯಕಾರಿಯಾಗಬಲ್ಲ ಹಕ್ಕಿ ಜ್ವರದ ಅಪಾಯ ಎದುರಿಸುತ್ತಿದೆ. ಕೇರಳ ಸೇರಿದಂತೆ ಐದು ರಾಜ್ಯಗಳಲ್ಲಿ ಹಕ್ಕಿ ಜ್ವರ ಹಬ್ಬಿರುವುದು ದೃಢಪಟ್ಟಿದೆ. ಲಕ್ಷಾಂತರ ಪಕ್ಷಿಗಳು ರೋಗದಿಂದ ಸಾವನ್ನಪ್ಪಿವೆ. ಕೆಲ ರಾಜ್ಯಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಹಕ್ಕಿಗಳನ್ನ ಕೊಲ್ಲುವ ಪ್ರಕ್ರಿಯೆ ನಡೆದಿದೆ. ನೆರೆಯ ಕೇರಳ ರಾಜ್ಯದಲ್ಲಿ ಹಕ್ಕಿ ಜ್ವರ ಇರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ಮಂಗಳೂರಿನಲ್ಲಿ 10ಕ್ಕೂ ಹೆಚ್ಚು ಕಾಗೆಗಳು ಸತ್ತಿದ್ದು, ಅವುಗಳ ಪರೀಕ್ಷಾ ವರದಿಗಾಗಿ ಸರ್ಕಾರ ಎದುರುನೋಡುತ್ತಿದೆ. ಗಡಿಜಿಲ್ಲೆಗಳಾದ ಮಂಗಳೂರು, ಕೊಡಗು, ಮೈಸೂರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಇನ್ಫೂಯೆಂಜಾ ಮಾದರಿಯ ಎ ಪ್ರಕಾರದ ವೈರಸ್ಗಳಿಂದ (H5N1) ಹಕ್ಕಿ ಜ್ವರ ಹಬ್ಬುತ್ತದೆ. ಫ್ಲೂ ಜ್ವರ ಮಾದರಿಯ ರೋಗ ಲಕ್ಷಣಗಳು ತೋರುತ್ತವೆ. ಕೇರಳ, ರಾಜಸ್ಥಾನ, ಮಧ್ಯ ಪ್ರದೇಶ, ಹರಿಯಾಣ ಹಾಗೂ ಹಿಮಾಚಲ ಪ್ರದೇಶದಲ್ಲಿ ಹಕ್ಕಿ ಜ್ವರ ಪ್ರಕರಣಗಳು ಬೆಳಕಿಗೆ ಬಂದಿವೆ. ಹರಿಯಾಣದಲ್ಲಿ ಲಕ್ಷಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿವೆ. ಹಿಮಾಚಲ ಪ್ರದೇಶದಲ್ಲಿ ವಲಸೆ ಪಕ್ಷಗಳು ಸಾವನ್ನಪ್ಪಿವೆ. ಮಧ್ಯ ಪ್ರದೇಶದಲ್ಲಿ ನೂರಾರು ದನಗಳು ಬಲಿಯಾಗಿವೆ.
ಭಾರತ ಮಾತ್ರವಲ್ಲದೆ ಹಲವು ದೇಶಗಳಲ್ಲೂ ಹಕ್ಕಿ ಜ್ವರ ಈಗಾಗಲೇ ದಾಂಗುಡಿ ಇಟ್ಟಿದೆ. ಯೂರೋಪ್ ಖಂಡದಲ್ಲಿ ನೆದರ್ಲ್ಯಾಂಡ್ಸ್, ಜರ್ಮನಿ, ಫ್ರಾನ್ಸ್, ಬೆಲ್ಜಿಯಂ, ಬ್ರಿಟನ್, ಡೆನ್ಮಾರ್ಕ್, ಸ್ವೀಡನ್, ಪೋಲ್ಯಾಂಡ್, ಕ್ರೊವೇಷಿಯಾ, ಉಕ್ರೇನ್ ದೇಶಗಳಲ್ಲಿ ಬರ್ಡ್ ಫ್ಲೂ ಇದೆ. ಏಷ್ಯಾದಲ್ಲಿ ಭಾರತ, ದಕ್ಷಿಣ ಕೊರಿಯಾ, ಜಪಾನ್ ಮೊದಲಾದ ದೇಶಗಳಲ್ಲಿ ಪ್ರಕರಣಗಳು ಖಚಿತಪಟ್ಟಿವೆ.
ಹೆಚ್5ಎನ್1 (H5N1) ರೋಗವು ಪಕ್ಷಿಗಳನ್ನ ಬಾಧಿಸುತ್ತದೆ. ಈ ಪಕ್ಷಿಗಳ ಮೂಲಕ ಮನುಷ್ಯ ಸೇರಿದಂತೆ ಬೇರೆ ಜೀವಿಗಳಿಗೂ ಹಬ್ಬುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ಹಬ್ಬುವುದಕ್ಕಿಂತ ಹೆಚ್ಚಾಗಿ ಪಕ್ಷಿಗಳ ಮೂಲಕ ಮನುಷ್ಯನಿಗೆ ಈ ವೈರಸ್ ಹರಡುತ್ತದೆ. ಸೋಂಕಿತ ಪಕ್ಷಿಯ ಸಂಪರ್ಕಕ್ಕೆ ಬಂದ ವ್ಯಕ್ತಿಗೆ ರೋಗ ತಗುಲುವ ಸಂಭವನೀತೆ ಹೆಚ್ಚಿರುತ್ತದೆ. ಆದರೆ, ಕೋಳಿ ಮಾಂಸವನ್ನು ಸರಿಯಾಗಿ ಬೇಯಿಸಿ ತಿಂದರೆ ರೋಗ ಅಂಟುವ ಸಾಧ್ಯತೆ ಇಲ್ಲ ಎನ್ನುತ್ತಾರೆ ತಜ್ಞರು. ಆದರೆ, ಹಕ್ಕಿ ಮೂಲಕ ಮಾನವನ ದೇಹ ಸೇರುವ ಹೆಚ್5ಎನ್1 ವೈರಸ್ ರೂಪಾಂತರಗೊಂಡುಬಿಟ್ಟಲ್ಲಿ ಮನುಷ್ಯನಿಂದ ಮನುಷ್ಯನಿಗೆ ಹರಡುವ ಅಪಾಯವೂ ಇದೆ. ಹಾಗಾಗಿ ಕಟ್ಟೆಚ್ಚರ ವಹಿಸುವುದು ಅತ್ಯಗತ್ಯವಾಗಿದೆ.