ಜನರು ವಾಹನ ಚಲಾಯಿಸುವಾಗ ಇನ್ಮುಂದೆ ಪೊಲೀಸರು ಹೀಗೆ ಮಾಡುವಂತಿಲ್ಲ !!ಸರ್ಕಾರದಿಂದ ಹೊಸ ಆದೇಶ
ಕರ್ನಾಟಕ ರಾಜ್ಯದಲ್ಲಿ ವಾಹನ ತಪಾಸಣೆ ನಡೆಸುವ ವೇಳೆ ಸಾರ್ವಜನಿಕರಿಗೆ ಅನಗತ್ಯ ಕಿರುಕುಳ ನೀಡಬಾರದು ಎಂಬುದಾಗಿ ಪೊಲೀಸ್ ಮಹಾನಿರ್ದೇಶಕರು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಈ ಆದೇಶದ ಪ್ರಕಾರ, ಸಂಚಾರ ಪೊಲೀಸರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಮತ್ತು ಯಾವುದೇ ಕಾರಣಕ್ಕೂ ದುರ್ವರ್ತನೆ ತೋರಬಾರದು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ.
ಹೊಸ ಮಾರ್ಗಸೂಚಿಯ ಪ್ರಕಾರ, ಕಣ್ಣಿಗೆ ಕಾಣುವ ಸಂಚಾರ ನಿಯಮ ಉಲ್ಲಂಘನೆಗಳು ಕಂಡುಬಂದಷ್ಟೇ ವಾಹನಗಳನ್ನು ತಡೆದು ದಾಖಲಾತಿಗಳನ್ನು ಪರಿಶೀಲಿಸಬೇಕು. ಯಾವುದೇ ಕಾರಣವಿಲ್ಲದೆ ವಾಹನಗಳನ್ನು ತಡೆದು ತಪಾಸಣೆ ನಡೆಸುವುದನ್ನು ನಿಷೇಧಿಸಲಾಗಿದೆ. ಅದೇ ರೀತಿ, ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವಂತೆ ದಿಡೀರ್ ಬ್ಯಾರಿಕೇಡ್ಗಳನ್ನು ಹಾಕಿ ವಾಹನಗಳನ್ನು ತಡೆಯುವುದನ್ನೂ ನಿಷೇಧಿಸಲಾಗಿದೆ. ಬ್ಯಾರಿಕೇಡ್ಗಳನ್ನು ಬಳಸಬೇಕಾದರೆ ಅವು ದೂರದಿಂದಲೇ ಕಾಣುವಂತೆ ಮತ್ತು ಸುರಕ್ಷಿತ ಸ್ಥಳಗಳಲ್ಲಿ ಮಾತ್ರ ಇರಬೇಕು ಎಂದು ಆದೇಶಿಸಲಾಗಿದೆ.
ತಪಾಸಣೆ ವೇಳೆ ವಾಹನ ಸವಾರರಿಂದ ಕೀ ಕಿತ್ತುಕೊಳ್ಳುವುದು ಅಥವಾ ದ್ವಿಚಕ್ರ ವಾಹನದ ಹಿಂಬದಿ ಸವಾರರನ್ನು ಬಲವಂತವಾಗಿ ನಿಲ್ಲಿಸುವುದು ಕಂಡುಬಂದರೆ ಸಂಬಂಧಿಸಿದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ನಿಯಮ ಉಲ್ಲಂಘಿಸಿ ವೇಗವಾಗಿ ಸಾಗುವ ವಾಹನಗಳನ್ನು ಹಿಂಬಾಲಿಸುವುದನ್ನು ನಿಲ್ಲಿಸಿ, ಬದಲಿಗೆ ವಾಹನದ ನೊಂದಣಿ ಸಂಖ್ಯೆಯನ್ನು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಇದೇ ವೇಳೆ, ತಪಾಸಣೆ ಸ್ಥಳದಲ್ಲಿ ಇರುವ ಪೊಲೀಸರು ಕಡ್ಡಾಯವಾಗಿ ಬಾಡಿ ವಾರ್ನ್ ಕ್ಯಾಮೆರಾಗಳನ್ನು ಧರಿಸಬೇಕು. ಸಾರ್ವಜನಿಕರೊಂದಿಗೆ ಅತ್ಯಂತ ಸೌಜನ್ಯದಿಂದ ವರ್ತಿಸುವುದು ಅವರ ಕರ್ತವ್ಯವಾಗಿದ್ದು, ಈ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಪಿ ಎಚ್ಚರಿಕೆ ನೀಡಿದ್ದಾರೆ.
ಹೀಗಾಗಿ, ರಾಜ್ಯದಾದ್ಯಂತ ತಕ್ಷಣದಿಂದಲೇ ಈ ನಿಯಮಗಳು ಜಾರಿಗೆ ಬರುವುದರಿಂದ ಸಂಚಾರ ಪೊಲೀಸರು ಹೊಸ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ.




