ಡಬಲ್ ಮಾಸ್ಕ್ ಧರಿಸುವವರು ಹಾಗೂ ಧರಿಸದೇ ಇರುವವರು ತಪ್ಪದೇ ಈ ಸುದ್ದಿ ಓದಿ..

Updated: Saturday, May 15, 2021, 17:05 [IST]

ಕೊರೊನಾ ಎರಡನೇ ಅಲೆ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಿದೆ. ಆದ್ದರಿಂದ ನೀವು ಹೊರಹೋಗುವ ಸಮಯದಲ್ಲಿ ತುಂಬಾ ಎಚ್ಚರಿಕೆಯಿಂದ ಇರುವುದು ಉತ್ತಮ. ತೊಂದರೆ ಆದನಂತರ ತಲೆಕೆಡಿಸಿಕೊಳ್ಳುವ ಬದಲು ತೊಂದರೆ ಆಗುವುದಕ್ಕಿಂತ ಮುಂಚೆ ಎಚ್ಚರಿಕೆ ಕ್ರಮಗಳನ್ನು ಉತ್ತಮವಾಗಿ ಹೊಂದುವುದು ಮುಖ್ಯ. ಇನ್ಮುಂದೆ ಡಬಲ್ ಮಾಸ್ಕ್ ಧರಿಸಿದರಷ್ಟೇ ಸೋಂಕಿನಿಂದ ಬಚಾವ್ ಆಗಬಹುದಂತೆ.  

ಕೆಲ ದಿನಗಳ ಹಿಂದಷ್ಟೇ ಅಮೆರಿಕಾದಲ್ಲಿ ಈ ಕುರಿತು ಅಧ್ಯಯನವೊಂದನ್ನು ನಡೆಸಲಾಗಿದೆ. ಸೆಂಟರ್ ಫಾರ್ ಡಿಸೀಜ್ ಕಂಟ್ರೋಲ್ ಅಂಡ್ ಪ್ರಿವೆಂಶನ್ ಈ ಅಧ್ಯಯನ ನಡೆಸಿದೆ. ಈ ಅಧ್ಯಯನದಲ್ಲಿ ಡಬಲ್ ಮಾಸ್ಕ್ ಧರಿಸುವುದರಿಂದ ಕೊರೊನಾ ವೈರಸ್ ನ ಸೋಂಕನ್ನು ಶೇ.95 ರಷ್ಟು ತಡೆಗಟ್ಟಬಹುದು ಎಂದು ಹೇಳಲಾಗಿದೆ. 
ಅದು ಹೇಗೆ ಎಂದರೆ, ಒಂದು ವೇಳೆ ನಿಮ್ಮ ಬಳಿ ಎರಡು ಸರ್ಜಿಕಲ್ ಮಾಸ್ಕ್ ಇದ್ದರೆ, ಆ ಮಾಸ್ಕ್ ಗಳಿಂದ ನಿಮ್ಮ ಮೂಗು ಮತ್ತು ಬಾಯಿ ಕವರ್ ಆಗುವ ರೀತಿ ಅವುಗಳನ್ನು ಧರಿಸಿ. ಆದರೆ, ಎರಡು ಸರ್ಜಿಕಲ್ ಮಾಸ್ಕ್ ಧರಿಸುವ ಸಲಹೆಯನ್ನು ಸಾಮಾನ್ಯವಾಗಿ ನೀಡಲಾಗುವುದಿಲ್ಲ. ಇಲ್ಲವೇ, ನಿಮ್ಮ ಬಳಿ ಒಂದು ಬಟ್ಟೆಯ ಮಾಸ್ಕ್ ಹಾಗೂ ಒಂದು ಸರ್ಜಿಕಲ್ ಮಾಸ್ಕ್ ಇದ್ದರೆ, ಮೊದಲು ನೀವು ಸರ್ಜಿಕಲ್ ಮಾಸ್ಕ್ ಧರಿಸಿ ಮತ್ತು ಅದರ ಮೇಲೆ ಬಟ್ಟೆಯ ಮಾಸ್ಕ್ ಧರಿಸಿ.   

ನೀವೂ ಸರ್ಜಿಕಲ್ ಮಾಸ್ಕ್ ಅನ್ನು ಕೇವಲ ಒಂದು ಬಾರಿಗೆ ಮಾತ್ರ ಧರಿಸಬಹುದಾಗಿದೆ. ಬಳಕೆಯ ಬಳಿಕ ಅದನ್ನು ಸರಿಯಾಗಿ ಡಿಸ್ಪೋಸ್ ಮಾಡಿ. ಬಟ್ಟೆಯ ಮಾಸ್ಕ್ ಅನ್ನು ನೀವು ನಿತ್ಯ ಬಿಸಿನೀರಿನಲ್ಲಿ ತೊಳೆಯಬಹುದು. ಮಾಸ್ಕ್ ತೆಗೆಯುವಾಗ ಮಾತನಾಡುವುದನ್ನು ನಿಲ್ಲಿಸಿ.

ಮಾಸ್ಕ್ ತೆಗೆದ ಬಳಿಕ ಕೈಗಳನ್ನು ಸ್ಯಾನಿಟೈಸ್ ಮಾಡಲು ಮರೆಯದಿರಿ. ಬಟ್ಟೆ ಮಾಸ್ಕ್ನಿಂದ ಸೋಂಕು ಒಳನುಸುಳುವ ಸಾಧ್ಯತೆಗಳು ಹೆಚ್ಚಿರುವುದರಿಂದ 2 ಮಾಸ್ಕ್ಗಳನ್ನು ಧರಿಸಬೇಕಾಗುತ್ತೆ. 2 ಪದರಗಳ ಮಾಸ್ಕ್ ವೈರಸ್ ಒಳನುಸುಳುವುದನ್ನು ತಡೆಯುತ್ತೆ ಎಂದಿದ್ದಾರೆ. ಎಂಥಾ ಮಾಸ್ಕ್ , ಎಷ್ಟು ಧರಿಸಬೇಕು ಅನ್ನುವುದಕ್ಕಿಂತ ಮಾಸ್ಕ್ನ್ನು ಹೇಗೆ ಧರಿಸಬೇಕು ಎಂಬುವುದು ಮುಖ್ಯವಾಗುತ್ತೆ. ಸೂಕ್ತ ರೀತಿಯಲ್ಲಿ ಮೂಗು ಮತ್ತು ಬಾಯಿ ಮುಚ್ಚುವಂತೆ ಮಾಸ್ಕ್ ಧರಿಸಬೇಕು.   

ಇನ್ನು ನೀವು ಎನ್-95 ಮಾಸ್ಕನ್ನೂ ಸರಿಯಾಗಿ ಧರಿಸದೆ ಇದ್ದರೆ ಪ್ರಯೋಜನವಿಲ್ಲ. ಮೊದಲು ಜನ ಸರಿಯಾಗಿ ಮಾಸ್ಕ್ ಧರಿಸಬೇಕು ಎಂದು ಗುಲೇರಿಯಾ ಅಭಿಪ್ರಾಯಪಟ್ಟಿದ್ದಾರೆ.