Avatar 2 ; ಅವತಾರ್ 2 ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ; ಸಿನಿಮಾದಲ್ಲಿದೆ ಈ ಕುತೂಹಲಕಾರಿ ಸಂಗತಿಗಳು
Updated:Friday, April 29, 2022, 16:03[IST]

ಹಾಲಿವುಡ್ನ 'ಅವತಾರ್' ಚಿತ್ರವನ್ನು ನೋಡಿ ಇಷ್ಟ ಪಟ್ಟ ಜನ ಚಿತ್ರದ ಮುಂದಿನ ಭಾಗ ಯಾವಾಗ ಎಂದು ಕಾಯುತ್ತಿದ್ದವರಿಗೆ ಈಗಾಗಲೇ ರಿಲೀಸ್ ದಿನಾಂಕದ ಮೂಲಕ ಚಿತ್ರತಂಡ ಉತ್ತರ ಕೊಟ್ಟಿದೆ. ಇಷ್ಟು ದಿನ 'ಅವತಾರ್ 2' ಎಂದು ಕರೆಯುತ್ತಿದ್ದ ಚಿತ್ರದ ಶೀರ್ಷಿಕೆ ಈಗ ಬದಲಾಗಿದೆ. ಬರೋಬ್ಬರಿ 167 ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.
'ಅವತಾರ್' ವಿಶ್ವದ ಸಿನಿಮಾ ಇತಿಹಾಸದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ. ಮೊದಲ ಸಿನಿಮಾ 2009ರಲ್ಲಿ ತೆರೆಗೆ ಬಂದಿತ್ತು. ಇದಾದ ಬಳಿಕ ಸೀಕ್ವೆಲ್ ಬರಲು ಸುಮಾರು 13 ವರ್ಷಗಳು ಹಿಡಿದಿವೆ. ಲಾಸ್ ವೇಗಾಸ್ನಲ್ಲಿ ನಡೆಯುತ್ತಿರುವ 'ಸಿನಿಮಾಕಾನ್ 2022' ಸಮಾವೇಶದಲ್ಲಿ ಈ ಶೀರ್ಷಿಕೆಯನ್ನು ಘೋಷಣೆ ಮಾಡಲಾಯಿತು. 20th ಸೆಂಚುರಿ ಸ್ಟುಡಿಯೋಸ್ನ ಮೂಲ ಕಂಪನಿಯಾದ ಡಿಸ್ನಿ ಈ ಸಮಾವೇಶದಲ್ಲಿ ಚಿತ್ರದ ಅಧಿಕೃತ ಟೈಟಲ್ ಘೋಷಣೆಯನ್ನು ಮಾಡಿದೆ.
ಕ್ರಿಸ್ಮಸ್ ಪ್ರಯುಕ್ತ 2022ರ ಡಿಸೆಂಬರ್ 16ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ 'ಅವತಾರ್: ದಿ ವೇ ಆಫ್ ವಾಟರ್' ಎಂದು ಶೀರ್ಷಿಕೆ ಇಡಲಾಗಿದೆ. ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಈ ಸಿನಿಮಾ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿದೆ. ಅವತಾರ್1' ಸಿನಿಮಾ ವಿಶ್ವ ಮಟ್ಟದಲ್ಲಿ 2.8 ಬಿಲಿಯನ್ ಡಾಲರ್ ಕಲೆಕ್ಷನ್ ಮಾಡಿದೆ. ಅಂದರೆ 21,729 ಕೋಟಿ ರೂಪಾಯಿ. ಈ ಚಿತ್ರದ ಕಲೆಕ್ಷನ್ಅನ್ನು ಬ್ರೇಕ್ ಮಾಡಲು ಈ ವರೆಗೆ ಯಾರಿಂದಲೂ ಸಾಧ್ಯವಾಗಿಲ್ಲ.