ಹೊಸ ಇತಿಹಾಸ ಸೃಷ್ಟಿಸಿದ ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್..

Updated: Tuesday, March 16, 2021, 09:59 [IST]

ಕ್ರಿಕೆಟ್ ನಲ್ಲಿ ದಾಖಲೆಗಳನ್ನು ಕೇವಲ ಭಾರತದ ಪುರುಷರಷ್ಟೇ ಮಾಡುತ್ತಿಲ್ಲ. ಬದಲಾಗಿ ಮಹಿಳಾ ಕ್ರಿಕೆಟ್ ಆಟಗಾರರು ಕೂಡ ದೊಡ್ಡದೊಡ್ಡ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದು ಕೊಳ್ಳುತ್ತಿದ್ದಾರೆ. ಭಾರತದ ಕ್ರಿಕೆಟ್ ದಂತಕಥೆ ಮಿಥಾಲಿ ರಾಜ್ ಇಂದು ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲು ಮುಟ್ಟಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ 10,000 ರನ್ ಗಡಿ ದಾಟಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ ಹಾಗೂ ವಿಶ್ವದ ಕೇವಲ ಎರಡನೇ ಆಟಗಾರ್ತಿ ಎನಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಮಿಥಾಲಿ ರಾಜ್ ಸಾಧನೆ ಮಾಡಿದ್ದಾರೆ.  

ಮಹಿಳಾ ಟೆಸ್ಟ್ ಕ್ರಿಕೆಟ್, ಏಕದಿನ ಮತ್ತು ಟಿ20 ಈ ಮೂರು ಮಾದರಿಯ ಕ್ರಿಕೆಟ್​ನಲ್ಲಿ ಒಟ್ಟು ಸೇರಿ ಅವರು 10 ಸಾವಿರ ರನ್ ಗಳನ್ನು ಕಲೆಹಾಕಿದ್ದಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ 10, ಏಕದಿನ ಕ್ರಿಕೆಟ್​ನಲ್ಲಿ 212 ಮತ್ತು ಟಿ 20 ಕ್ರಿಕೆಟ್​ನಲ್ಲಿ 89 ಪಂದ್ಯಗಳನ್ನ ಆಡಿರುವ ಮಿಥಾಲಿ ರಾಜ್ ಒಟ್ಟು 10,001 ರನ್ ಗಳಿಸಿದ್ದಾರೆ. 38 ವರ್ಷದ ಭಾರತದ ಮಹಿಳಾ ಕ್ರಿಕೆಟ್ ನ ದೃವತಾರೆ ಮಹತ್ವದ ಸಾಧನೆಯನ್ನು ಮಾಡಿದ್ದಾರೆ. ಮಿಥಾಲಿ ಅವರ ಸಾಧನೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಮಹಿಳಾ ಕ್ರಿಕೆಟ್ ನಲ್ಲಿ 10000 ರನ್ ಪೂರೈಸುವುದು ಸಾಮಾನ್ಯ ಸಾಧನೆಯಲ್ಲ ಎಂದು ಹಿರಿಯ ಕ್ರಿಕೆಟ್ ಆಟಗಾರರು ಹೊಗಳಿದ್ದಾರೆ.  

ಒಟ್ಟು 311 ಪಂದ್ಯಗಳಲ್ಲಿ ಈ ಸಾಧನೆ ಬಂದಿದೆ. ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ದಂತಕಥೆ ಚಾರ್ಲೆಟ್ ಎಡ್ವರ್ಡ್ಸ್ ಅವರು ಒಟ್ಟು 309 ಅಂತರರಾಷ್ಟ್ರೀಯ ಪಂದ್ಯಗಳಿಂದ 10,273 ರನ್ ಗಳಿಸಿ ತಮ್ಮ ವೃತ್ತಿಜೀವನ ಅಂತ್ಯಗೊಳಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಮಿಥಾಲಿ ರಾಜ್ಯ ವಿಶ್ವ ದಾಖಲೆ ಸೃಷ್ಟಿಸುವ ಅವಕಾಶವಿದೆ. ಮಹಿಳಾ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ದಾಖಲೆ ಸದ್ಯ ಎಡ್ವರ್ಡ್ಸ್ ಅವರ ಹೆಸರಲ್ಲಿದೆ. ಈ ಸರಣಿಯಲ್ಲಿ ಇನ್ನೂ 2 ಏಕದಿನ ಪಂದ್ಯಗಳು ಹಾಗೂ 3 ಟಿ20 ಪಂದ್ಯಗಳು ನಡೆಯಬೇಕಿವೆ. ಮಿಥಾಲಿ ಅವರು ಇನ್ನೂ 273 ರನ್ ಗಳಿಸಿದರೆ ವಿಶ್ವದಾಖಲೆಗೆ ಬಾಜನರಾಗಲಿದ್ದಾರೆ.