ಗುಡುಗು, ಮಿಂಚು ಸಹಿತ ಸುರಿದ ಭಾರೀ ಮಳೆ: ಇನ್ನೂ ಮೂರು ದಿನ ಮುಂದುವರೆಯಲಿದೆ ವರುಣಾರ್ಭಟ

By Infoflick Correspondent

Updated:Wednesday, April 13, 2022, 21:51[IST]

ಗುಡುಗು, ಮಿಂಚು ಸಹಿತ ಸುರಿದ ಭಾರೀ ಮಳೆ: ಇನ್ನೂ ಮೂರು ದಿನ ಮುಂದುವರೆಯಲಿದೆ ವರುಣಾರ್ಭಟ

ಬೆಂಗಳೂರಿನಲ್ಲಿ ಇಂದು ಸಂಜೆ ಇದ್ದಕ್ಕಿದ್ದಂತೆ ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿದಿದೆ. ಮಧ್ಯಾಹ್ನದಿಂದಲೇ ಆಗಾಗ ಮೋಡ ಬಿಸಿಲು ಕಾಣಿಸಿಕೊಳ್ಳುತ್ತಿತ್ತು. ಎರಡು ಮೂರು ಗಮಟೆ ಸುಮಾರಿಗೆ ಸಂಪೂರ್ಣವಾಗಿ ಕವಿದ ವಾತಾವರಣವಿತ್ತು. ಮೋಡ ಆವರಿಸಿಕೊಂಡ ಗಂಟೆಯೊಳಗೆ ಭಾರೀ ಮಳೆ ಸುರಿದಿದೆ. ಸುಮಾರು ಅರ್ಧ ಗಂಟೆ ಸುರಿದ ಮಳೆ ಈಗ ಸ್ವಲ್ಪ ಬ್ರೇಕ್ ಕೊಟ್ಟಿದೆ. ಇನ್ನು ಗುಡುಗುತ್ತಿದ್ದು, ರಾತ್ರಿ ಮಳೆ ಬರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. 

ಅದಾಗಲೇ ಕಳೆದೆರಡು ತಿಂಗಳಿನಿಂದ ಸುಡುಸುಡು ಬಿಸಿಲಲ್ಲಿ ಬೆಂದಿದ್ದ ಬೆಂದಕಾಳೂರಿಗೆ ಕ್ಷಣಕಾಲ ವರುಣ ತಂಪೆರೆದಿದ್ದಾನೆ. ಹೊರಗೆ ಹೋಗಿದ್ದ ಬೆಂಗಳೂರಿಗರು ಮಳೆಗೆ ಸಿಲುಕಿದ್ದು, ಪರದಾಡುವಂತಾಯ್ತು. ಬೆಂಗಳೂರಿನ ರಾಜಾಜಿನಗರ, ಮಲ್ಲೇಶ್ವರಂ, ಬಸವೇಶ್ವರ ನಗರ, ಜಯನಗರ, ಸೌತ್ ಎಂಡ್ ಸರ್ಕಲ್, ಜೆ.ಪಿ. ನಗರ, ಬನಶಂಕರಿ, ಕತ್ರಿಗುಪ್ಪೆ, ಪದ್ಮನಾಭನಗರ, ವಿಲ್ಸನ್ ಗಾರ್ಡನ್, ಟೌನ್ ಹಾಲ್, ಮೈಸೂರು ರಸ್ತೆ, ಮಾರ್ಕೆಟ್, ಮೆಜೆಸ್ಟಿಕ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜೋರು ಮಳೆಯಾಗಿದೆ. 

ಇನ್ನು ಮಳೆ ರಾಯನ ಅಬ್ಬರಕ್ಕೆ ಕೆಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ಸಂಜೆ ವೇಳೆಗೆ ಕೆಲಸ ಮುಗಿಸಿಕೊಂಡು ಮನೆ ಸೇರಬೇಕೆಂದುಕೊಂಡಿದ್ದ ಜನ ಟ್ರಾಫಿಕ್ ಹಾಗೂ ಮಳೆರಾಯನ ಕಾಟಕ್ಕೆ ಸಿಲುಕಿದ್ದಾರೆ. ಕ್ ಸವಾರರು ಅಲ್ಲಲ್ಲಿ ಫ್ಲೈಓವರ್ ಕೆಳಗೆ ಆಶ್ರಯ ಪಡೆದಿದ್ದು, ಪಾದಚಾರಿಗಳು, ಬಸ್ ಸ್ಟಾಪ್, ಅಂಗಡಿ, ಹೋಟೇಲ್ ಗಳ ಮೊರೆ ಹೋಗಿದ್ದಾರೆ. ಮಳೆಯಾರ್ಭಟದಿಂದ ಶಿವಾಜಿನಗರ ಸೇರಿದಂತೆ ಕೆಲವೆಡೆ ಕರೆಮಟ್ ಕಟ್ ಆಗಿದೆ. ಈ ಸೆಕೆಯಲ್ಲಿ ವಿದ್ಯುತ್ ಕಡಿತವಾಗಿರುವುದು ಮನೆಯಲ್ಲಿರುವವರಿಗೆ ತೊಂದರೆಯುಂಟಾಗಿದೆ.    

ರಾಜ್ಯದಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆಯಾಗಲಿದೆ. ಈಗಾಗಲೇ ಕಳೆದೆರಡು ದಿನಗಳಿಂದ ಶಿವಮೊಗ್ಗ, ಕರಾವಳಿ ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದು, ಇದು ಮುಂದುವರೆಯಲಿದೆ. ತಮಿಳುನಾಡಿನ ಕರಾವಳಿಯಲ್ಲಿ ಮೇಲ್ಮೈ ಬಿರುಗಾಳಿ ಬೀಸುತ್ತಿರುವ ಹಿನ್ನೆಲೆ ಮಳೆಯಾಗುತ್ತಿದೆ. ಇನ್ನೂ ಎರಡು ಮೂರು ದಿನ ರಾಜ್ಯದಲ್ಲಿ ಚದುರಿದ ಮಳೆಯಾಗಲಿದ್ದು, ಕೆಲವೆಡೆ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. 


ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗದಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ದಾವಣಗೆರೆಯಲ್ಲೂ ಸಾಧಾರಣ ಮಳೆಯಾಗಲಿದೆ. ಇನ್ನು ಅರುಣಾಚಲ ಪ್ರದೇಶ, ಹಿಮಾಲಯ ಪ್ರದೇಶ, ಸಿಕ್ಕಿಂನಲ್ಲೂ ಮಳೆಯಾಗಲಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ದಕ್ಷಿಣ ಭಾರತದಲ್ಲಿ ಗುಡುಗು ಸಹಿತ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.